ವಿಜಯ ಸಂಘರ್ಷ
ಶಿವಮೊಗ್ಗ: ಇಂಧನ ದರ ಏರಿಕೆ ಹಾಗೂ ಅಗತ್ಯವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಇಂದು ಸೈಕಲ್ ಜಾಥಾ ನಡೆಸಿ ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಛೇರಿ ಯಿಂದ ಹೊರಟ ಜಾಥಾ ಬಾಲರಾಜ್ ಅರಸ್ ರಸ್ತೆ ಮೂಲಕಸಾಗಿ ನೆಹರು ರಸ್ತೆ, ಶಿವಪ್ಪ ನಾಯಕ ವೃತ್ತ- ಗಾಂಧಿಬಜಾರ್,ರಾಮಣ್ಣ ಶ್ರೇಷ್ಟಿ ಪಾರ್ಕ್ ವರೆಗೆ ನಡೆಯಿತು.
ಜಾಥಾ ಉದ್ದಕ್ಕೂ ಪ್ರತಿಭಟನಾಕಾರರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ದ ಘೋಷಣೆ ಕೂಗಿದರು.
ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರ ಜನಪ್ರಿಯ ಅಚ್ಚೇದಿನ್ ಘೋಷಣೆ ಕುರಿತು ವ್ಯಂಗ್ಯವಾಡಿದ ಕಾಂಗ್ರೆಸ್, ಮೋದಿ ಹಠಾವೋ ದೇಶ್ ಬಚಾವ್,ತೊಲಗಿಸಿ ತೊಲಗಿಸಿ ಬಿಜೆಪಿ ತೊಲಗಿಸಿ ಎಂದು ಆಡಳಿತರೂಢ ಬಿಜೆಪಿ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್ ಸುಂದರೇಶ್,ಬೆಲೆ ಏರಿಕೆ ತಡೆಯದ ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರದ ದುರಾಡಳಿತ ವಿರೋಧಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ದೇಶದಲ್ಲಿ ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಪೆಟ್ರೋಲ್, ಡೀಸೆಲ್, ಗ್ಯಾಸ್ ಸೇರಿದಂತೆ ಅಗತ್ಯವಸ್ತುಗಳ ಬೆಲೆ ಏರಿಕೆಯಾಗಿದ್ದು, ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ದೂರಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಮಂಜುನಾಥ್ ಭಂಡಾರಿ, ಯುವ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ ಗಿರೀಶ್, ಕೆ.ರಂಗನಾಥ್, ವಿಶ್ವನಾಥ್ ಕಾಶಿ, ದೀಪಕ್ ಸಿಂಗ್,ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾ ಕುಮಾರಿ,ಮಹಾನಗರ ಪಾಲಿಕೆ ಸದಸ್ಯರಾದ ಬಿ.ಎ ರಮೇಶ್ ಹೆಗಡೆ,ಹೆಚ್.ಸಿ ಯೋಗೇಶ್, ರೇಖಾ ರಂಗನಾಥ್,ಯಮುನಾ ರಂಗೇಗೌಡ ಸೇರಿದಂತೆ ಹಲವರಿದ್ದರು.
ಜನವಿರೊಧಿಸರಕಾರ :ಕೆ.ಬಿ.ಪ್ರಸನ್ನಕುಮಾರ್
ಕೇಂದ್ರ ಸರ್ಕಾರ ದಿನೇ ದಿನೇ ತೈಲಬೆಲೆ ಏರಿಕೆ ಮಾಡಿರುವುದನ್ನು ವಿರೋಧಿಸಿ ನಗರದಲ್ಲಿ ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ನೇತೃತ್ವದಲ್ಲಿ ಸೈಕಲ್ ರ್ಯಾಲಿ ಸವಾರಿ ಮಾಡುವ ಮೂಲಕ ಪ್ರತಿಭಟಿಸಲಾಯಿತು.
ಗೋಪಿ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕೆ.ಬಿ. ಪ್ರಸನ್ನಕುಮಾರ್, ಯುಪಿಎ ಸರ್ಕಾರ ಅಧಿಕಾರದಲ್ಲಿದ್ದ 10 ವರ್ಷಗಳಲ್ಲಿ ತೈಲ ಬೆಲೆ 70 ರೂ. ದಾಟಿರಲಿಲ್ಲ. 400 ರೂ.ಗೆ ಅಡುಗೆ ಅನಿಲ ಲಭ್ಯವಾಗುತ್ತಿತ್ತು. ಶ್ರೀಸಾಮಾನ್ಯರ ಹಾಗೂ ಬಡವರ ಸಂಕಷ್ಟಗಳಿಗೆ ಸ್ಪಂದಿಸಿದ ನಮ್ಮ ಸರ್ಕಾರ ಬೆಲೆ ಏರಿಕೆ ಮಾಡಿರಲಿಲ್ಲ. ಆದರೆ, ಕಳೆದ 7 ವರ್ಷಗಳಿಂದ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಶತಕ ಬಾರಿಸಿದೆ. 400 ರೂ. ಇದ್ದ ಅಡುಗೆ ಅನಿಲದ ಸಿಲಿಂಡರ್ ವೊಂದರ ಬೆಲೆ 900 ರೂ. ಆಗಿದೆ. ಈ ಮೂಲಕ ಕೇಂದ್ರ ಸರ್ಕಾರ ಬಡವರ ಮೇಲೆ ಗದಾಪ್ರಹಾರ ನಡೆಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನೂರಾರು ಮಂದಿ ಸ್ವಯಂ ಪ್ರೇರಣೆಯಿಂದ ಸೈಕಲ್ ನಲ್ಲಿ ಮೆರವಣಿಗೆಗೆ ಸಾಥ್ ನೀಡಿದರು. ರ್ಯಾಲಿಯಲ್ಲಿ ಮುಖಂಡರಾದ ಎನ್.ಕೆ. ಶ್ಯಾಮ ಸುಂದರ್, ವಿಜಯ ಲಕ್ಷ್ಮಿ ಪಾಟೀಲ್, ಆಸೀಫ್, ದೀಪಕ್ ಸಿಂಗ್, ಸುವರ್ಣಾ ನಾಗರಾಜ್, ರಘು, ಬೊಮ್ಮನಕಟ್ಟೆ ಮಂಜುನಾಥ್ ಮತ್ತಿರರಿದ್ದರು.
ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ
+91 9743225795