ಕಾಶಿ ಶೇಷಾದ್ರಿ ದೀಕ್ಷಿತ್‌ ನೇತೃತ್ವದಲ್ಲಿ ತುಂಗಾ ನದಿಗೆ ತುಂಗಾರತಿ

 


ವಿಜಯ ಸಂಘರ್ಷ

ತೀರ್ಥಹಳ್ಳಿ: ದಕ್ಷಿಣಾಯಣ ಪುಣ್ಯ ಕಾಲ, ಕರ್ಕಾಟಕ ಸಂಕ್ರಮಣದ ಶುಕ್ರವಾರದ ಪುಣ್ಯದಿನದಂದು
ಪಟ್ಟಣದಲ್ಲಿ ಪವಿತ್ರ ತುಂಗಾ ನದಿಗೆ ತುಂಗಾರತಿಯನ್ನು ಮಾಡಲಾಯಿತು.

ಆರತ್ರಿಕ ಎಂಬ ಸಂಸ್ಕೃತ ಪದದಿಂದ ಆರತಿ ಎಂಬುದಾಗಿ ಪದ ಬಳಕೆ ಬಂದಿದ್ದು,  ಆರತಿ ಎಂದರೆ ಕತ್ತಲಿನಿಂದ ಬೆಳಕಿನೆಡೆಗೆ ಸಾಗುವುದು ಎಂದು ಅರ್ಥ. ದೇವರಿಂದ ಸೂರ್ಯನ ಬೆಳಕು, ಜೀವದ ಬೆಳಕು ಮತ್ತು ಆಶೀರ್ವಾದ ವೆಂಬ ಬೆಳಕು ಸಿಗುತ್ತದೆ, ಅಂತಹ ದೇವರಿಗೆ  ಭಕ್ತಾದಿಗಳು ತಮ್ಮ ಪ್ರೀತಿ, ಭಕ್ತಿ ಮತ್ತು ಕೃತಜ್ಞತೆಯನ್ನು ದೇವರಿಗೆ ಸಲ್ಲಿಸುವ ಒಂದು ಆಚರಣೆಯೇ ಆರತಿ. ಪಂಚಭೂತಗಳಾದ ಜಲ, ವಾಯು, ಅಗ್ನಿ, ಭೂಮಿ ಹಾಗೂ ಆಕಾಶವು ಬೇರೆ ಬೇರೆ ರೀತಿಯಲ್ಲಿ ಪೂಜಿಸಲ್ಪಡುತ್ತದೆ. ಹಾಗೆಯೇ ದೇವಿ ಸ್ವರೂಪಳಾದ ನದಿಗೆ ಆರತಿ ಮಾಡುವುದು ಒಂದು ಭಕ್ತಿಪೂರ್ವಕ ಪದ್ಧತಿಯಾಗಿದೆ.

ತಹಶೀಲ್ದಾರ್ , ಪುತ್ತಿಗೆ ಮಠ, ಶೃಂಗೇರಿ ಮಠ, ಹಾಗೂ ಆಸ್ತಿಕರ ಸಹಯೋಗ ದೊಂದಿಗೆ ತುಂಗಾರತಿಯು ಪ್ರಾರಂಭವಾಗಿದ್ದು, ಸಾರೋದ್ಧಾರವಾಗಿ ಪಟ್ಟಣದ ಅರ್ಚಕ ವೃಂದ ತುಂಗಾರತಿ ಯನ್ನು ವರ್ಷ ಪೂರ್ತಿ ಮುಂದುವರೆಸಿ ಕೊಂಡು  ಹೋಗಲಿದ್ದಾರೆ, ಪುತ್ತಿಗೆ ಮಠದ ಸಮೀಪವಿರುವ ತುಂಗಾ ದಂಡೆಯಲ್ಲಿ, ಪ್ರತಿ ದಿನವೂ ತುಂಗಾರತಿಯು ಮುಂದುವರೆಯಲಿದೆ.  ಮೊದಲಿಗರಾಗಿ ತುಂಗಾರತಿ ಆರಂಭ ಮಾಡಿದ ಶ್ರೀ ಕಾಶೀಶೇಷಾದ್ರಿ ದೀಕ್ಷಿತ್‌ ತುಂಗಾರತಿಯ ನೇತೃತ್ವ ವಹಿಸಿದ್ದರು.



ತಿಂಗಳಿಗೆ ಓರ್ವ ಅರ್ಚಕರ ನೇತೃತ್ವದಲ್ಲಿ ತುಂಗಾರತಿಯು ಮುಂದುವರಿ ಯಲಿದ್ದು, ಊರಿನ ಜನರ, ಆಸ್ತಿಕರ ಸಹಕಾರವನ್ನು ಅರ್ಚಕ ವೃಂದದವರು ಕೋರಿದ್ದಾರೆ.

ಈ ಸಂದರ್ಭದಲ್ಲಿ  ಮಾತನಾಡಿದ ತಹಶೀಲ್ದಾರ್ ಶ್ರೀಪಾದ್‌ ತುಂಗಾರತಿ ಯನ್ನು ನಿರಂತರವಾಗಿ ಮಾಡಬೇಕು. ಎಲ್ಲಿಯವರೆಗೆ ಸೂರ್ಯ ಚಂದ್ರ ಇರುತ್ತಾರೋ ಅಲ್ಲಿಯವರೆಗೆ ಇದರ ಪರಂಪರೆ ನಿತ್ಯ ನಡೆಯಬೇಕು ಎಂಬ ಸದುದ್ದೇಶವನ್ನು ಇಟ್ಟುಕೊಂಡು ಇಂದು ತುಂಗಾರತಿ ಎಂಬ ಮಹತ್ವಪೂರ್ಣ ಕಾರ್ಯಕ್ರಮವನ್ನು ತುಂಗಾ ನದಿಯ ಸಮೀಪ ಇಟ್ಟುಕೊಂಡಿರುವುದು ತಮಗೆ ಸಂತಸವಾಗಿದೆ. ತಪ್ಪಿಲ್ಲದಂತೆ ಈ ಕಾರ್ಯಕ್ರಮವನ್ನು ತುಂಗೆಯ ಮನಸ್ಸು ಗೊಪ್ಪುವಂತೆ ಈ ಕಾರ್ಯಕ್ರಮವನ್ನು ನೆರವೇರಿಸಿಕೊಳ್ಳಲಿ. ತುಂಗೆಯ ಆಶೀರ್ವಾದ ಅರ್ಚಕ ವೃಂದದ ಮೇಲೆ ಇರಲಿ. ದೇವರು ಎನ್ನುವುದು ಮನುಷ್ಯ ಆಕೃತಿಯಲ್ಲೋ ಪಶು ಆಕೃತಿಯಲ್ಲೋ, ಪಕ್ಷಿ ಆಕೃತಿಯಲ್ಲೋ ಅಥವಾ ಇನ್ಯಾವುದೋ ಆಕೃತಿಯಲ್ಲಿ ನಾವು ನೋಡಬೇಕು ಅಂದುಕೊಳ್ಳುತ್ತೇವೆ. ಭೂಮಿ, ಜಲ, ಆಕಾಶ, ವಾಯು, ಅಗ್ನಿ ಈ ಎಲ್ಲಾ ಪಂಚ ಮಹಾಭೂತಗಳು ಕೂಡ ದೇವರೇ ಹಾಗಾಗಿ ದೇವರನ್ನೇ ಆರತಿಯನ್ನಾಗಿ ಹಿಡಿದು ದೇವರಿಗೆ ಆರತಿ ಮಾಡುವಂತಹ ಕಾರ್ಯಕ್ರಮ ಇದಾಗಿದೆ‌.  ಇಡೀ ಪ್ರಕೃತಿಯನ್ನೇ ದೇವರು ಎಂದು ತಿಳಿದು ನಾವಿಂದು ತುಂಗಾರತಿ ಎಂಬ ಕಾರ್ಯಕ್ರಮವನ್ನು ಆರಂಭ ಮಾಡಿದ್ದೇವೆ. ನನ್ನ ಸಂಪೂರ್ಣ ಸಹಕಾರವಿದೆ. ಈ ತುಂಗಾರತಿ ಪರಂಪರೆಯನ್ನು ಆರಂಭಿಸಿದ ಎಲ್ಲರಿಗೂ ನಾನು ವಂದಿಸುತ್ತೇನೆ. ಈ ಪರಂಪರೆ ಎಂದೂ ನಿಲ್ಲದಂತೆ ಮಾಡಲು ಏನೆಲ್ಲಾ ಬೇಕೋ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದ ಅವರು, ಈ ಕಾರ್ಯಕ್ರಮ ನಿತ್ಯ ನಿರಂತರವಾಗಿ  ಅರ್ಥಪೂರ್ಣವಾಗಿ ನಡೆಯಲಿ. ಈ ಕಾರ್ಯಕ್ರಮದ ಮುಖಾಂತರ ತುಂಗೆ ಪ್ರಸನ್ನಳಾಗಿ ಈ ತಾಲೂಕಿಗೆ ಎಲ್ಲಾ ಜನರಿಗೆ ಬೇಕಾದ ಎಲ್ಲವನ್ನೂ ಕರುಣಿಸಲಿ ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ  ಮುಜರಾಯಿ ಇಲಾಖೆಯ ಜಯಪ್ರಕಾಶ್, ತಾಲೂಕ್  ಕಚೇರಿಯ ಸೂರತ್ , ಉಡುಪಿ, ಭೀಮನಕಟ್ಟೆ, ಹಾಗೂ ಚೆನ್ನೈನ ಋತ್ವಿಜ ವೃಂದ , ಊರಿನ ಪ್ರಮುಖರು , ಆಸ್ತಿಕರು ಹಾಜರಿದ್ದರು.

✍🏻 ರಶ್ಮಿ ಶ್ರೀಕಾಂತ್ ನಾಯಕ್
       ತೀರ್ಥಹಳ್ಳಿ

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು