ಮಲೆನಾಡಿಗೆ ಒದಗಿಬಂದ ಮಾಧ್ಯಮ ಅಕಾಡೆಮಿ ಸದಸ್ಯತ್ವ

 

ವಿಜಯ ಸಂಘರ್ಷ


ಶಿವಮೊಗ್ಗ : ಕರ್ನಾಟಕ ಮಾಧ್ಯಮ ಅಕಾಡೆಮಿಯ ಸದಸ್ಯರಾಗಿ ಜಿಲ್ಲೆಯ ಕನ್ನಡಪ್ರಭ ದಿನಪತ್ರಿಕೆಯ ಹಿರಿಯ ವರದಿಗಾರ ಗೋಪಾಲ ಯಡಗೆರೆ ಹಾಗೂ ನಮ್ಮನಾಡು ದಿನ ಪತ್ರಿಕೆಯ ಸಂಪಾದಕ ಕೆ.ವಿ ಶಿವಕುಮಾರ್  ಅವರನ್ನು ನೇಮಕ ಮಾಡಲಾಗಿದೆ.

ಸಾಹಿತ್ಯ ಕೃಷಿ ಪ್ರೇಮಿ ಹಿರಿಯ ಪತ್ರಕರ್ತ ಗೋಪಾಲ ಯಡಗೆರೆ 

ಮೂಲತಃ ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಯಡಗೆರೆ ಊರಿನವರಾದ ಗೋಪಾಲ್ ಯಡಗೆರೆಯವರು, ಶೃಂಗೇರಿಯ ಜೆಸಿಬಿ ಎಂ ಕಾಲೇಜು  ಬಿ.ಎಸ್.ಸಿ ಪದವಿ ಮುಗಿಸಿ ಬೆಂಗಳೂರಿನಲ್ಲಿ ಕೆಲವು ವರ್ಷಗಳ ಕಾಲ ಕೆಲಸ ಮಾಡಿ ನಂತರ ಜಿಲ್ಲೆಯಲ್ಲಿ ಉದಯವಾಣಿ ಪತ್ರಿಕೆಯ ವರದಿಗಾರರಾಗಿ 28 ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿದ್ದಾರೆ. ಪ್ರಸ್ತುತ  ಕನ್ನಡಪ್ರಭ ದಿನಪತ್ರಿಕೆಯಲ್ಲಿ  ಹಿರಿಯ ವರದಿಗಾರರಾಗಿ  ಕಾರ್ಯ ನಿರ್ವಹಿಸುತ್ತಿದ್ದಾರೆ.

ಚಿಕ್ಕವಯಸ್ಸಿನಿಂದಲೂ ಸಾಹಿತ್ಯದಲ್ಲಿ ಆಸಕ್ತಿಯನ್ನು ಹೊಂದಿದ್ದರು. ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಾಗ ಪ್ರಜಾವಾಣಿ ಪತ್ರಿಕೆಯಲ್ಲಿ ಮಕ್ಕಳ ಲೇಖನವನ್ನು ಬರೆದಿದ್ದರು. ಕಾಲೇಜು ದಿನಗಳಲ್ಲಿ ನಾಟಕಗಳನ್ನು ಬರೆದು ಬೆಸ್ಟ್ ಡೈರೆಕ್ಟರ್ ಎಂಬ ಬಿರುದನ್ನು ಸಹ ಪಡೆದಿದ್ದಾರೆ.

ನಾನಾಗದ ನಾನು ಕವನ ಸಂಕಲನ, ಸೋಲನ್ನ ಸೋಲಿಸಿ, ಮಿಸ್ ಕಾಲ್ ಎಂಬ ಕೃತಿಗಳನ್ನು ಸಹ ರಚಿಸಿದ್ದಾರೆ. ಕೇವಲ ಸಾಹಿತ್ಯ ಕೃಷಿ ಮಾತ್ರವಲ್ಲದೆ ಪರಿಸರ ಪ್ರೇಮ ಹಾಗೂ ಕೃಷಿಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ಇವರು ತಮ್ಮ ಬಿಡುವಿನ ಸಮಯವನ್ನು ತೋಟದಲ್ಲೇ ಕಳೆಯುತ್ತಾರೆ.

ಮಾನವೀಯತೆಯ ವರದಿಗಾಗಿ ಭೂಪಾಳಂ ಚಂದ್ರಶೇಖರ್ ಪ್ರಶಸ್ತಿ, ಪ್ರತಿಧ್ವನಿ ಯಶಸ್ವಿ ಕಲಾ ಸಾಹಿತ್ಯ ಸೇರಿದಂತೆ ಹಲವು ಪ್ರಶಸ್ತಿಗಳು ಅವರದಾಗಿದೆ.

ನಮ್ಮನಾಡಿನ ಕೆ.ವಿ.ಶಿವಕುಮಾರ್



ಭದ್ರಾವತಿ ತಾಲೂಕಿನ ಆಗರದಹಳ್ಳಿಯ ಅಶೋಕನಗರ ಶಿವಕುಮಾರ್ ಅವರು ಶಿವಮೊಗ್ಗ ಆಚಾರ್ಯ ತುಳಸಿ ವಾಣಿಜ್ಯ ಕಾಲೇಜಿನಲ್ಲಿ ಬಿಕಾಂ ಪದವಿ ಪಡೆದು ನಂತರ ಅದೇ ಕಾಲೇಜಿನಲ್ಲಿ ಎಲ್ ಎಲ್ ಬಿ ಮಾಡಿ ವಕೀಲ ವೃತ್ತಿಯನ್ನು ಆರಂಭಿಸಿದರು. ನಂತರ ನಮ್ಮನಾಡು ದಿನಪತ್ರಿಕೆಯನ್ನು ಆರಂಭಮಾಡಿ 21ವರ್ಷಗಳಿಂದ ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಅಲ್ಲದೆ ಯುವ ಪತ್ರಕರ್ತರ ಮಾರ್ಗದರ್ಶಕರಾಗಿದ್ದಾರೆ.

ನಮ್ಮ ನಾಡು ಕನ್ನಡ ದಿನಪತ್ರಿಕೆಯ ವೃತ್ತಿಪರತೆಯನ್ನು ಗುರುತಿಸಿ ಕರ್ನಾಟಕ ಮಾಧ್ಯಮ ಅಕಾಡೆಮಿ 2012ರಲ್ಲಿ ಆಂದೋಲನ ಪ್ರಶಸ್ತಿ ನೀಡಿ ಗೌರವಿಸಿದೆ. ಪ್ರಸ್ತುತ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷರಾಗಿ ಹಾಗೂ ಕರ್ನಾಟಕ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯ ಉಪಾಧ್ಯಕ್ಷರಾಗಿರುವ ಇವರು ಸಂಘಟನಾತ್ಮಕವಾಗಿ ಅನೇಕ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡಿದ್ದಾರೆ.ಕೇವಲ ಪತ್ರಿಕೋದ್ಯಮ ದಲ್ಲಿ ಮಾತ್ರವಲ್ಲದೆ ಸಮಾಜಸೇವೆ ಯಲ್ಲಿ ಸಹ ತಮ್ಮನ್ನು ತಾವು ತೊಡಗಿಸಿಕೊಂಡು, ಸಮಾಜಮುಖಿ ಕಾರ್ಯಕ್ರಮಗಳನ್ನೂ ಮಾಡಿದ್ದಾರೆ.

ಒಟ್ಟಾರೆ ಮಲೆನಾಡಿನ ಸ್ನೇಹಮಯಿ ಗಳಾದ ಇಬ್ಬರಿಗೂ ಮಾಧ್ಯಮ ಅಕಾಡೆಮಿ ಸದಸ್ಯರನ್ನಾಗಿ ನೇಮಕ ಮಾಡಿರುವುದು ಕೇವಲ ಮಲೆನಾಡಿಗೆ ಮಾತ್ರವಲ್ಲ ರಾಜ್ಯಕ್ಕೆ ಕೀರ್ತಿ ಬಂದಿದೆ.

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು