ವಿಜಯ ಸಂಘರ್ಷ
ಶಿವಮೊಗ್ಗ : ಮುಂಜಾನೆಯಿಂದ ಮುಂಗಾರು ಮಳೆ ಚುರುಕುಗೊಂಡಿದ್ದು ಬಿಡುವಿಲ್ಲದೆ ಸುರಿಯುತ್ತಿದೆ. ಅಧಿಕ ಮಳೆಯಿಂದಾಗಿ ತುಂಗೆಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಲಿದೆ.
ಬೆಳಿಗ್ಗೆಯಿಂದ ತುಂಗಾ ಜಲಾನಯನ ಪ್ರದೇಶಗಳಾದ ಶೃಂಗೇರಿಯಲ್ಲಿ 65.2 ಮಿಮಿ, ಕಿಗ್ಗಾದಲ್ಲಿ 66.4 ಮಿಮಿ, ಹರಿಹರ ಪುರದಲ್ಲಿ 27.0 ಮಿಮಿ, ಕಮ್ಮರಡಿಯಲ್ಲಿ 30.8 ಮಿಮಿ ಹಾಗೂ ಕೆರೆಕಟ್ಟೆಯಲ್ಲಿ 88 ಮಿಮಿ ಮಳೆಯಾಗಿದೆ.
ಸಧ್ಯ ಗಾಜನೂರು ಡ್ಯಾಂನಿಂದ ಸರಿಸುಮಾರು 17500 ಕ್ಯೂಸೆಕ್ಸ್ ನೀರನ್ನ ನದಿಗೆ ಬಿಡಲಾಗಿದೆ. 7 ಗೇಟ್ ಮೂಲಕ ನದಿಗೆ ಜಲಾಶಯದಿಂದ ನೀರು ಹರಿಸಲಾಗಿದೆ. ಮಳೆ ಹೀಗೆ ಮುಂದುವರೆದರೆ ಮಧ್ಯಾಹ್ನದ ಹೊತ್ತಿಗೆ ಇದಕ್ಕೂ ಹೆಚ್ಚಿನ ಪ್ರಮಾಣದ ನೀರನ್ನ ನದಿಗೆ ಬಿಡಲಾಗುವುದು.
ಅಂದುಕೊಂಡದ್ದಕ್ಕಿಂತ ಸ್ವಲ್ಪ ತಡವಾಗಿಯೇ ಆರಂಭವಾದ ಮುಂಗಾರು ಕೃಷಿ ಸಮುದಾಯಕ್ಕಂತೂ ಸದ್ಯ ಒಳ್ಳೆಯದನ್ನೇ ಮಾಡುತ್ತಿದೆ. ಕೇರಳದಿಂದ ಮಹಾರಾಷ್ಟ್ರದೆಡೆಗೆ ವೇಗವಾದ ಮೇಲ್ಮೈಸುಳಿಗಾಳಿ ಬೀಸುತ್ತಿದೆ. ಇದರ ಪ್ರಭಾವದಿಂದಾಗಿ ರಾಜ್ಯ ಕರಾವಳಿ ಭಾಗದಲ್ಲಿ ಇಂದು ಧಾರಾಕಾರ ಮಳೆಯಾಗಲಿದೆ.
ಅದರಂತೆ ಮಲೆನಾಡಿನಲ್ಲೂ ಸಾಕಷ್ಟು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಇನ್ನು ಈ ಮಳೆ ವಾರವೆಲ್ಲಾ ಮುಂದುವರೆ ಯಲಿದ್ದು ಕ್ರಮೇಣ ಅಬ್ಬರ ಕಡಿಮೆಯಾಗುವ ನಿರೀಕ್ಷೆ ಇದೆ.
ಕನಿಷ್ಟ ಜು: 21ರವರೆಗೆ ಮಳೆಯ ಏರಿಳಿತ ಮುಂದುವರೆಯುತ್ತಲೇ ಇರಲಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ. ರಾಜ್ಯದ ಕರಾವಳೆ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ, ಮಂಗಳೂರು ಮತ್ತು ಮಲೆನಾಡು ಜಿಲ್ಲೆಗಳಾದ ಚಿಕ್ಕಮಗ ಳೂರು, ಶಿವಮೊಗ್ಗ, ಕೊಡಗಿನಲ್ಲಿ ಮಳೆಯ ಆರ್ಭಟ ದೀರ್ಘಕಾಲ ದವರೆಗೆ ಮುಂದುವರೆಯಲಿದೆ. ಸದ್ಯ ರಾಜ್ಯದೆಲ್ಲೆಡೆ ಕೃಷಿ ಚಟುವಟಿಕೆ ಚುರುಕಾಗಿದೆ.
ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795

