ವಿಜಯ ಸಂಘರ್ಷ
ಶಿವಮೊಗ್ಗ: ಮಲೆನಾಡಿನ ಪ್ರವಾಸಿ ತಾಣಗಳಿಗೆ ಬರಬೇಕಾದರೆ ಕಡ್ಡಾಯವಾಗಿ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ತರಲೇಬೇಕು. ಇಲ್ಲದಿದ್ದರೆ, ಬಂದ ದಾರಿಗೆ ಸುಂಕ ಇಲ್ಲವೆಂಬಂತೆ ವಾಪಸ್ ತೆರಳಬೇಕಾಗುತ್ತದೆ.
ಇಂಥಾದ್ದೊಂದು ಕಠಿಣ ಹೆಜ್ಜೆ ಇಡಲು ಜಿಲ್ಲಾಡಳಿತ ಮುಂದಾಗಿದೆ. ವಾರಾಂತ್ಯಗಳಲ್ಲಿ ಸಾವಿರಾರು ಜನ ಕೋವಿಡ್ ಮಾರ್ಗಸೂಚಿ ಪಾಲಿಸದೇ ಪ್ರವಾಸಿ ತಾಣಗಳಿಗೆ ಲಗ್ಗೆ ಇಡುತ್ತಿರುವುದರಿಂದ ನೆಗೆಟಿವ್ ವರದಿಯನ್ನು ಕಡ್ಡಾಯಗೊಳಿಸಿದೆ.
ಮೂರನೇ ಅಲೆಯ ಭೀತಿ ಈಗಾಗಲೇ ರಾಜ್ಯದಲ್ಲಿ ಶುರುವಾಗಿದ್ದು, ಇದನ್ನು ಲೆಕ್ಕಿಸದೆ ಪ್ರವಾಸಿಗರು ಲಂಗು ಲಗಾಮಿಲ್ಲದೇ ಮಲೆನಾಡಿನತ್ತ ಬರುತ್ತಿದ್ದಾರೆ. ಅದರ ಭಾಗವಾಗಿಯೇ ತೀರ್ಥಹಳ್ಳಿಯ ಚೆಕ್‌ಪೋಸ್ಟ್‌ನಲ್ಲಿ ಪರಿಶೀಲನೆ ಮಾಡಲಾಗುತ್ತಿದೆ. ಆದರೆ, ಪರೀಕ್ಷೆ ಮಾಡುತ್ತಿಲ್ಲ. ಹೀಗಾಗಿ, ಸೋಂಕಿತರು ಸುಲಭವಾಗಿ ಜಿಲ್ಲೆಗೆ ಪ್ರವೇಶಿಸಿ ಸೋಂಕು ಹರಡುವ ಭೀತಿ ಇದೆ.
ಕಳೆದ ಭಾನುವಾರ 14,444 ಪ್ರವಾಸಿಗರು ಒಂದೇ ದಿನ ಜೋಗಕ್ಕೆ ಭೇಟಿ ನೀಡಿದ್ದು, ಕೋವಿಡ್ ಮಾರ್ಗಸೂಚಿಯನ್ನು ಸಂಪೂರ್ಣ ಗಾಳಿಗೆ ತೂರಲಾಗಿತ್ತು. ಇದನ್ನು ಗಮನಿಸಿ ಜಿಲ್ಲಾಡಳಿತ ಕಠಿಣ ಕ್ರಮಕ್ಕೆ ಮುಂದಾಗಿದೆ. ಜೋಗ ಮಾತ್ರವಲ್ಲದೇ ಎಲ್ಲ ಪ್ರವಾಸಿ ತಾಣಗಳಲ್ಲೂ ಪ್ರವಾಸಿಗರು ಆರ್‌ಟಿಪಿಸಿಆರ್ ನೆಗೆಟಿವ್ ವರದಿ ತೋರಿಸಬೇಕು.
ಜೋಗಕ್ಕೆ 19 ದಿನಗಳಲ್ಲಿ 62 ಸಾವಿರ ಜನ ಭೇಟಿ: ಜುಲೈ 5ರಿಂದ ಜೋಗದಲ್ಲಿ ಅನ್‌ಲಾಕ್ ಮಾಡಲಾಗಿದೆ. ಜುಲೈ 15ರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಜೋಗಕ್ಕೆ ಭೇಟಿ ನೀಡುತ್ತಿದ್ದಾರೆ. ಜುಲೈ 15ರಿಂದ ಆಗಸ್ಟ್ 3ರ ವರೆಗೆ ಅಂದಾಜು 68,800 ಪ್ರವಾಸಿಗರು ಭೇಟಿ ನೀಡಿದ್ದಾರೆ. ರಾಜ್ಯದ ಉತ್ತರ ಕರ್ನಾಟಕ ಮತ್ತು ತಮಿಳುನಾಡು, ಆಂಧ್ರಪ್ರದೇಶದಿಂದ ಪ್ರವಾಸಿಗರು ಜೋಗಕ್ಕೆ ಭೇಟಿ ನೀಡಿದ್ದಾರೆ.
ಆರ್‌ಟಿಪಿಸಿಆರ್ ನೆಗೆಟಿವ್ ವರದಿ ತೋರಿಸಿದರಷ್ಟೇ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಪ್ರವೇಶಿಸಲು ಅವಕಾಶ ನೀಡಲಾಗುವುದು. ಒಂದು ವೇಳೆ, ವರದಿ ಇರದಿದ್ದರೆ ಮುಲಾಜಿಲ್ಲದೇ ವಾಪಸ್ ಕಳುಹಿಸಲಾಗುವುದು. ಕೋವಿಡ್ ಸೋಂಕು ಹರಡುವುದನ್ನು ತಡೆಯಲು ಈ ಕ್ರಮಕ್ಕೆ ಮುಂದಾಗಿದ್ದು, ಸಾರ್ವಜನಿಕರು ಸಹಕರಿಸಬೇಕು' ಎಂದು ಡಿಸಿ ಕೆ. ಬಿ. ಶಿವಕುಮಾರ್ ತಿಳಿಸಿದ್ದಾರೆ.
ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795