ನಾಯಿಗಳನ್ನು ಜೀವಂತ ಹೂತಿಟ್ಟ ಪ್ರಕರಣ: 12 ಜನ ಅರೆಸ್ಟ್

 

ವಿಜಯ ಸಂಘರ್ಷ



ಭದ್ರಾವತಿ: ತಾಲೂಕಿನ ಕಂಬದಾಳ್- ಹೊಸೂರಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಾಯಿಗಳನ್ನು ಜೀವಂತವಾಗಿ ಹೂತಿಟ್ಟು ಮಾರಾಣ ಹೋಮಕ್ಕೆ ಕಾರಣವಾಗಿರುವ ಘಟನೆಗೆ ಸಂಬಂಧಿಸಿದಂತೆ ಒಟ್ಟು 12 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಗ್ರಾಮ ಪಂಚಾಯಿತಿ ಕಾರ್ಯದರ್ಶಿ,  ಇಬ್ಬರು ಸದಸ್ಯರು ಹಾಗೂ ಓರ್ವ ಕರವಸೂಲಿಗಾರ ಸೇರಿದಂತೆ 12 ಮಂದಿಯನ್ನು ಬಂಧಿಸಲಾಗಿದೆ. ಆರಂಭದಲ್ಲಿಯೇ ಈ ಪ್ರಕರಣದಲ್ಲಿ ಗ್ರಾ ಪಂ ಕೈವಾಡವಿದೆ ಎಂಬ ಅನುಮಾನ ಸ್ಥಳೀಯರಿಂದ ವ್ಯಕ್ತವಾಗಿತ್ತು.

 ಸೆ.3 ರಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳನ್ನು ಹಿಡಿದು ನಂತರ ಅವುಗಳನ್ನು ಟಾಟಾ ಏಸ್ ವಾಹನದ ಮೂಲಕ ತಮ್ಮಡಿಹಳ್ಳಿಯ ಎಂಪಿಎಂ ಅರಣ್ಯ ವ್ಯಾಪ್ತಿಯಲ್ಲಿ ಜೆಸಿಬಿ ಬಳಸಿ ಎರಡು ಗುಂಡಿಗಳನ್ನು ತೆಗೆದು ಜೀವಂತವಾಗಿ ಹೂತು ಹಾಕಲಾಗಿತ್ತು. ಈ ವಿಚಾರ ಸ್ಥಳೀಯ ಗ್ರಾಮಸ್ಥರ ಗಮನಕ್ಕೆ ಬಂದಿದ್ದು, ತಕ್ಷಣ ಗ್ರಾಮಸ್ಥರು ಶಿವಮೊಗ್ಗ ಪ್ರಾಣಿದಯಾ ಸಂಘದವರಿಗೆ ಈ ವಿಚಾರ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ್ದ ಪ್ರಾಣಿದಯಾ ಸಂಘದವರು ಹೂತು ಹಾಕಲಾಗಿದ್ದ ನಾಯಿಗಳ ಮೃತದೇಹಗಳನ್ನು ಪತ್ತೆ ಹಚ್ಚಿ ಹೊರತೆಗೆಯುವ ಮೂಲಕ ಪ್ರಕರಣ ಬೆಳಕಿಗೆ ಬರಲು ಕಾರಣಕರ್ತರಾಗಿದ್ದರು.

ಈ ಸಂಬಂಧ ಪ್ರಕರಣ ದಾಖಲಿಸಿ ಕೊಂಡು ತನಿಖೆ ಕೈಗೊಂಡಿದ್ದ ಗ್ರಾಮಾಂತರ ಠಾಣೆ ಪೊಲೀಸರು ಇದೀಗ 12 ಮಂದಿಯನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಒಟ್ಟು 15 ಮಂದಿ ಭಾಗಿಯಾಗಿದ್ದಾರೆ ಎನ್ನಲಾಗಿದ್ದು, ಉಳಿದ ಮೂವರ ಬಂಧನಕ್ಕಾಗಿ ಕಾರ್ಯಾಚರಣೆ ಮುಂದುವರೆಸಿದ್ದಾರೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಾಯಿಗಳ ಹಾವಳಿ ಹೆಚ್ಚಾದ ಹಿನ್ನಲೆಯಲ್ಲಿ ಸ್ವತಃ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮೈಸೂರಿನ ಕೆ ಆರ್. ನಗರದಿಂದ ನಾಯಿ ಹಿಡಿಯುವವರನ್ನು ಕರೆಸಿದ್ದಾರೆ ಎನ್ನಲಾಗಿದೆ. ಹಿಡಿದ ನಾಯಿಗಳಿಗೆ ವಿಷದ ಚುಚ್ಚುಮದ್ದು ನೀಡಿ ಕೊಲ್ಲಲಾಗಿದೆ ಎಂಬ ಆರೋಪಗಳು ಇದೀಗ ಕೇಳಿ ಬರುತ್ತಿದ್ದು, ಈ ನಡುವೆ ಹೂತು ಹಾಕಲಾಗಿದ್ದ ಒಂದು ಗುಂಡಿಯಲ್ಲಿನ ಸುಮಾರು 60 ನಾಯಿಗಳ ಮೃತದೇಹಗಳನ್ನು ಹೊರ ತೆಗೆಯಲಾಗಿದ್ದು, ಪಶುಸಂಗೋಪನೆ ಇಲಾಖೆಯ ವೈದ್ಯರಿಂದ ನಾಯಿಗಳ ಮೃತದೇಹಗಳ ಮರುಣೋತ್ತರ ಪರೀಕ್ಷೆ ನಡೆಸಲಾಗಿದೆ.  ಅಲ್ಲದೆ ಮೃತದೇಹದ ಮಾದರಿಗಳನ್ನು ಸಂಗ್ರಹಿಸಿ (ಮೂಳೆ, ಚರ್ಮ, ಕೂದಲು ಹಾಗೂ ಕಿಡ್ನಿ) ಎಫ್‌ಎಸ್‌ಎಲ್ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ.

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು