ಬೆಲೆ ಏರಿಕೆ ನಡುವೆ ಗೌರಿ ಹಬ್ಬದ ಸಂಭ್ರಮ

 

ವಿಜಯ ಸಂಘರ್ಷ



ಶಿವಮೊಗ್ಗ: ಹೆಣ್ಣು ಮಕ್ಕಳ ಹಬ್ಬವೆಂದೇ ಹೇಳಲಾಗುವ ಗೌರಿ ಹಬ್ಬವನ್ನು ಗುರುವಾರ ಜಿಲ್ಲೆಯಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು.



ತವರಿಗೆ ಬಂದು ಸಹೋದರ, ಸಹೋದರಿಯರ ನಡುವೆ ಗೌರಿಯ ಪೂಜೆಯೊಂದಿಗೆ ಹಬ್ಬ ಆಚರಿಸಿದರು. ಅನೇಕ ಮನೆಗಳಲ್ಲಿ ಗೌರಿ ಪ್ರತಿಷ್ಠಾಪಿ ಸಲಾಗಿದೆ. ಕಷ್ಟಗಳ ನಡುವೆಯೂ ಸಡಗರದಿಂದಲೇ ಶ್ರದ್ಧಾ ಭಕ್ತಿಯಿಂದ ಹಬ್ಬ ಆಚರಿಸಿದ್ದಾರೆ.

ನಗರದ ಬಹುತೇಕ ಎಲ್ಲ ದೇವಾಲಯಗಳಲ್ಲೂ ಬೆಳಿಗಿನಿಂದಲೂ ವಿಶೇಷ ಪೂಜೆ ನೆರವೇರಿಸಲಾಗಿದೆ. ಈ ಬಾರಿ ಗಣೇಶ ಮತ್ತು ಗೌರಿಯ ಮೂರ್ತಿಗಳು ಹೆಚ್ಚು ಖರೀದಿ ಯಾಗದಿದ್ದರೂ ಕೂಡ ಹಬ್ಬದ ಸಂಭ್ರಮವಂತೂ ಮನೆ ಮಾಡಿದೆ.
ನಗರದ ಬಸವೇಶ್ವರ ದೇವಸ್ಥಾನ, ರಾಮಣ್ಣ ಶ್ರೇಷ್ಠಿ ಪಾರ್ಕ್ ಗಣಪತಿ ದೇವಸ್ಥಾನ, ತುಳಜಾ ಭವಾನಿ ಹಾಗೂ ಮೈಲಾರೇಶ್ವರ, ರವೀಂದ್ರ ನಗರ ಗಣಪತಿ ದೇವಸ್ಥಾನ, ಕಲ್ಲಳ್ಳಿ ಗಣಪತಿ ದೇವಸ್ಥಾನ ಮೊದಲಾದ ದೇವಾಲಯ ಗಳಲ್ಲಿ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.

ಗ್ರಾಮಾಂತರ ಪ್ರದೇಶಗಳಲ್ಲಿ ಸುಖ-ಶಾಂತಿ-ಸಮೃದ್ದಿಗೆ ಪ್ರಾರ್ಥಿಸಿ ಮಹಿಳೆಯರು ಗಂಗೆಗೆ ವಿಶೇಷ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು. ಮುತ್ತೈದೆಯರಿಗೆ ಸೌಭಾಗ್ಯ ನೀಡುವ ಹಬ್ಬವೆಂದೆ ಪೌರಾಣಿಕ ಹಿನ್ನೆಲೆ ಹೊಂದಿರುವ ಗೌರಿ ಹಬ್ಬವನ್ನು ಮಹಿಳೆಯರು ಗೌರಿ ಮೂರ್ತಿಯನ್ನು ಪ್ರತಿಷ್ಠಾಪಿಸಿ, ನೈವೇದ್ಯಗಳನ್ನು ಅರ್ಪಿಸುವ ಮೂಲಕ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ನಗರದ ಸೈನ್ಸ್ ಮೈದಾನ, ಗೋಪಿ ವೃತ್ತ, ವಿನೋಬನಗರ, ಜೈಲ್ ಸರ್ಕಲ್, ಲಕ್ಷ್ಮೀ ಚಿತ್ರ ಮಂದಿರ ವೃತ್ತ ಸೇರಿದಂತೆ ಹಲವೆಡೆ ಗಣೇಶನ ವಿಗ್ರಹಗಳು ಮಾರುಕಟ್ಟೆಗೆ ಬಂದಿವೆ. ಅನೇಕರು ಮಕ್ಕಳೊಂದಿಗೆ ಬಂದು ಗಣೇಶ ಮೂರ್ತಿಯನ್ನು ಕೊಂಡೊಯ್ಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಅನೇಕ ಸಂಘ ಸಂಸ್ಥೆಗಳು, ಕೆಲವು ರಾಜಕೀಯ ಪಕ್ಷಗಳು ಗೌರಿ ಹಬ್ಬದ ಹಿನ್ನಲೆಯಲ್ಲಿ ಮಹಿಳೆಯರಿಗೆ ಬಾಗಿನ ಕೊಟ್ಟು ಗೌರವಿಸಿರುವುದು ವಿಶೇಷವಾಗಿದೆ. ಕಾಂಗ್ರೆಸ್ ಕಚೇರಿಯಲ್ಲಿ ಕೂಡ ಮಹಿಳಾ ಕಾರ್ಯಕರ್ತೆಯರಿಗೆ ಬಾಗಿನ ನೀಡಿ ಗೌರವಿಸಲಾಗಿದೆ.
ಹಬ್ಬದ ಹಿನ್ನಲೆಯಲ್ಲಿ ಹೂವು, ಹಣ್ಣು, ತರಕಾರಿ ದಿನಸಿ ವಸ್ತುಗಳ ಬೆಲೆ ಮಾತ್ರ ಗಗನಕ್ಕೇರಿದೆ. ಬೇಳೆ, ಬೆಲ್ಲ, ಅಡುಗೆ ಎಣ್ಣೆ ದರ ಏರಿಕೆಯಾಗಿದ್ದು, ಹಬ್ಬ ಮಾಡುವುದು ಬಡ ಮತ್ತು ಮಧ್ಯಮ ವರ್ಗದವರಿಗೆ ಕಷ್ಟವಾಗುತ್ತಿದೆ.
ಗಂಡನ ಮನೆಯಲ್ಲಿ ಎಷ್ಟೇ ಶ್ರೀಮಂತ ರಾಗಿದ್ದರೂ, ತವರು ಮನೆಯವರು ಬಡವರಾಗಿದ್ದರೂ ಅವರು ಕೊಡುವ ಬಾಗಿನವನ್ನು ಕಣ್ಣಿಗೆ ಒತ್ತಿಕೊಂಡು ತವರನ್ನು ಹರಸುವ ದೃಶ್ಯಗಳು ಕೂಡ ಹಲವೆಡೆ ಕಂಡು ಬಂದಿವೆ.

ಪ್ರತಿ ಗೌರಿವು ಮಹಿಳೆಯರಿಗೆ ಒಂದು ವಿಶೇಷ ಸಂದರ್ಭವಾಗಿದೆ. ನಾಳೆ ಗಣೇಶನ ಹಬ್ಬ ಕೂಡ ನಡೆಯಲಿದ್ದು, ನಗರದಲ್ಲಿ ಈಗಾಗಲೇ ಗಣಪತಿ ಪ್ರತಿಷ್ಠಾಪನೆಗೆ ಕೊನೆಯ ಹಂತದ ಸಿದ್ಧತೆ ನಡೆದಿವೆ.

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು