ಎಲ್ಲಂದರಲ್ಲಿ ತ್ಯಾಜ್ಯದ ರಾಶಿ: ಸಾಂಕ್ರಾಮಿಕ ರೋಗ ಕಾಡುವ ಭೀತಿ

 

ವಿಜಯ ಸಂಘರ್ಷ



ತೀರ್ಥಹಳ್ಳಿ: ತಾಲೂಕಿನಾದ್ಯಂತ ಕೊರೊನಾ ನಡುವೆ ನಿಂತ ನೀರಿನಲ್ಲಿ ಉತ್ಪತ್ತಿಯಾಗುತ್ತಿರುವ ಸೊಳ್ಳೆಗಳಿಂದ ಅನೇಕ ರೋಗಗಳು ಹರಡುತ್ತಿದ್ದು ಮೇಲಿನ ಕುರುವಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲೆಂದರಲ್ಲಿ ಸೊಳ್ಳೆ ಉತ್ಪತ್ತಿ ಕೇಂದ್ರವಾಗಿ ಕಂಡು ಬರುತ್ತಿರುವ ತ್ಯಾಜ್ಯದ ರಾಶಿ ಕಂಡು ಗ್ರಾಮಸ್ಥರು ಚಿಂತೆಗೀಡಾಗಿದ್ದಾರೆ.

ಕೊಳೆತು ದುರ್ನಾತ ಬೀರುತ್ತಿರುವ ತ್ಯಾಜ್ಯ ಮಳೆಯ ನೀರಿನೊಂದಿಗೆ ಬೆರೆತು ರಸ್ತೆಯಲ್ಲಿ ಎಲ್ಲೆಂದರಲ್ಲಿ ಹರಿಯುತ್ತಿದ್ದು ಇದರಿಂದ ಸಾಂಕ್ರಾಮಿಕ ರೋಗಗಳ ಭೀತಿಯನ್ನು ಎದುರಿಸಬೇಕಾಗಿದೆ. ಹಲವಾರು ಬಾರಿ ತ್ಯಾಜ್ಯ ಹಾಕುತ್ತಿರುವುದರ ಕುರಿತು ಗ್ರಾಮಸ್ಥರು ಲಿಖಿತ ದೂರು ನೀಡಿ ಗ್ರಾಮ ಪಂಚಾಯತಿ ಎದುರೇ ಸ್ಥಳೀಯ ಯುವಕರು ಧರಣಿ ಕುಳಿತರೂ ಧರಣಿ ಕುಳಿತ ಒಂದೆರೆಡು ದಿನ ನೆಪ ಮಾತ್ರಕ್ಕೆ ತ್ಯಾಜ್ಯವನ್ನು ತೆಗೆದರಾದರೂ ಮತ್ತೆ ಅದೇ ಜಾಗದಲ್ಲಿ ತ್ಯಾಜ್ಯದ ರಾಶಿ ಕಂಡು ಬರುತ್ತಿದ್ದು ಗ್ರಾಮ ಪಂಚಾಯತಿಯಲ್ಲಿ ಸ್ವಚ್ಛತೆಯ ಬಗ್ಗೆ ಯಾವುದೇ ರೀತಿಯ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗದೇ ಇರುವುದರಿಂದ ಸ್ಥಳೀಯರು ಬಹಳಷ್ಟು ತೊಂದರೆ ಅನುಭವಿಸುವಂತಾಗಿದೆ. ಮೇಲಿನ ಕುರುವಳ್ಳಿ- ಮೇಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಬುಕ್ಲಾಪುರ, ಹೆನ್ನಂಗಿ ಸೇತುವೆಯ ಬಳಿ ಮೂಟೆಗಟ್ಟಲೆ ರಾಶಿ ರಾಶಿ ತ್ಯಾಜ್ಯವು ರಸ್ತೆಯ ಮೇಲೆಲ್ಲಾ ಹರಿದಾಡುತ್ತಿದೆ. ಅದರ ಪಕ್ಕದಲ್ಲಿಯೇ ಇರುವ ತ್ಯಾಜ್ಯ ಸಂಗ್ರಹಣಾ ತೊಟ್ಟಿ ಇದ್ದು ಅದನ್ನು ಸಹ ಅಡ್ಡ ಹಾಕಿದ್ದಾರೆ. ಇದನ್ನು ನೋಡಿದ ಕೆಲವರು ತ್ಯಾಜ್ಯದ ಮೂಟೆಗಳನ್ನು ಪಕ್ಕದಲ್ಲಿಯೇ ಇರುವ ಹಳ್ಳಕ್ಕೆ ಎಸೆಯುತ್ತಿದ್ದಾರೆ ಎಂಬ ದೂರು ಗ್ರಾಮಸ್ಥರಿಂದ ಕೇಳಿ ಬರುತ್ತಿದೆ. ಇದರಂತೆಯೇ ಮೇಲಿನ ಕುರುವಳ್ಳಿ ಸರ್ಕಲ್ ಸಮೀಪದ ರಸ್ತೆಯಲ್ಲಿ ತ್ಯಾಜ್ಯ ಕೊಳೆತು ನಾರುತ್ತಿದೆ ಹಾಗೆಯೇ ಯಾವಾಗಲೂ ಜನ ಓಡಾಡುವ ಪ್ರದೇಶವಾದ ಉಜ್ಜೀವನ್ ಬ್ಯಾಂಕ್ ಎದುರು ರಸ್ತೆಯಲ್ಲಿ ಕಸದ ರಾಶಿ ಕಂಡು ಬರುತ್ತಿದ್ದು ಪ್ಲಾಸ್ಟಿಕ್ ಮತ್ತಿತರ ಪದಾರ್ಥಗಳನ್ನು ಹಸುಗಳು ತಿಂದು ಸಾವನ್ನಪ್ಪಿದ ಘಟನೆಯೂ ಕೂಡ ನಡೆದಿದೆ. ರಸ್ತೆಯ ಬದಿ ಅಲ್ಲಲ್ಲಿ ಅನೇಕ ಕಡೆಗಳಲ್ಲಿ ಕಸದ ರಾಶಿ ಕಂಡು ಬರುತ್ತಿದ್ದು ದುರ್ನಾತ ಬೀರುತ್ತಿದೆ. ಇದರಿಂದ ಈ ಮಾರ್ಗದಲ್ಲಿ ಸಂಚರಿಸುವ ಸಾರ್ವಜನಿಕರು, ವಾಹನ ಸವಾರರು ನಿತ್ಯ ಕಿರಿಕಿರಿ ಅನುಭವಿಸು ವಂತಾಗಿದೆ. ಬುಕ್ಲಾಪುರ ಸೇತುವೆ ಬಳಿ ಎರೆಡು ಮೂರು ಕಡೆಗಳಲ್ಲಿ ಕಸ ಎಸೆಯಲಾಗಿದ್ದು ಆ ಜಾಗ ಜನನಿಬಿಡ ವಾಗಿದ್ದು ಒಂದು ರೀತಿಯಲ್ಲಿ ಕಸ ಡಂಪಿಂಗ್ ಯಾರ್ಡ್ ಆಗಿ ಮಾರ್ಪಟ್ಟಿದೆ.

ಮೇಲಿನ ಕುರುವಳ್ಳಿ ಗ್ರಾಮ ಪಂಚಾಯತಿಗೆ ಸಂಬಂಧ ಪಟ್ಟವರೇ ಅನೇಕರು ವಾಹನಗಳಲ್ಲಿ ಕಸ ಎಸೆದು ಬರುವುದು ಕಂಡು ಬರುತ್ತಿದ್ದು, ಈ ಜಾಗಕ್ಕೆ ಗ್ರಾಮ ಪಂಚಾಯತಿ ವತಿಯಿಂದ ರಸ್ತೆಯ ಬದಿಯಲ್ಲಿ ಕಸ ಎಸೆಯದಂತೆ ನಾಮ ಫಲಕ ಅಳವಡಿಸಲಿ ಎಂಬ ಮಾತು ಸ್ಥಳೀಯ ನಿವಾಸಿ ಒತ್ತಾಯಿಸಿದ್ದಾರೆ.

ಹೆದ್ದಾರಿ ಪಕ್ಕ ಕಸ ಎಸೆಯುವವರ ವಿರುದ್ಧ ದಂಡ ಹಾಕುವಂತಹ ಕಠಿಣ ಕ್ರಮ ಕೈಗೊಂಡರೆ ಮಾತ್ರ ಇದಕ್ಕೆ ಕಡಿವಾಣ ಹಾಕಬಹುದು ಎಂದು ಸ್ಥಳೀಯ ಕೃಷಿಕ ಅನಂತರಾಜ್‌ ತಿಳಿಸಿದ್ದಾರೆ.

ಈ ಸಮಸ್ಯೆಯನ್ನು ಗಂಭಿರವಾಗಿ ತೆಗೆದುಕೊಳ್ಳದೇ ಸ್ಥಳೀಯ ಮೇಲಿನ ಕುರುವಳ್ಳಿ ಗ್ರಾಮ ಪಂಚಾಯತಿ ಈ ಪ್ರದೇಶದಲ್ಲಿ ತ್ಯಾಜ್ಯ ಎಸೆಯುವವರನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳದ ಕಾರಣದಿಂದ ಒಮ್ಮೆ ಸ್ವಚ್ಛಗೊಂಡ ಪ್ರದೇಶದಲ್ಲಿ ಮತ್ತೆ ಮತ್ತೆ ತ್ಯಾಜ್ಯ ತಂದು ಸುರಿದು ಉದ್ಧಟತನ ವನ್ನು ಪ್ರದರ್ಶಿಸುತ್ತಿದ್ದಾರೆ.ಇತ್ತ ಗ್ರಾಮ ಪಂಚಾಯತಿಗೆ ನಾಲ್ಕು ತಿಂಗಳ ಹಿಂದೆ ಸ್ವಚ್ಛತೆಯ ದೃಷ್ಟಿಯಿಂದ ತ್ಯಾಜ್ಯ ತೆಗೆಯಲು ಹೊಸ ಗೂಡ್ಸ್ ವಾಹನ ವೊಂದನ್ನು ಸರ್ಕಾರದಿಂದ ನೀಡಿದ ರಾದರೂ ಆ ವಾಹನಕ್ಕೆ ಎರೆಡೆರೆಡು ಬಾರಿ ಸ್ಥಳೀಯ ದೇವಸ್ಥಾನದಲ್ಲಿ ಪೂಜೆ ಮಾಡಿ ಗೋಡನ್‌ನಲ್ಲಿ ನಿಲ್ಲಿಸಲಾಗಿದ್ದು ಹೊಸ ಗಾಡಿಗೆ ಕಸ ಹಾಕುವ ಭಾಗ್ಯ ಇನ್ನೂ ಕೂಡಿ ಬಂದಿಲ್ಲವಾಗಿದೆ. ಎರಡು ಮೂರು ವರ್ಷಗಳ ಹಿಂದೆ ನಿರ್ಮಲ ಗ್ರಾಮ ಪ್ರಶಸ್ತಿಗೆ ಪಾತ್ರವಾದ ಮೇಲಿನ ಕುರುವಳ್ಳಿ ಗ್ರಾಮದಲ್ಲಿ ಇಂದು ಎಲ್ಲೆಂದ ರಲ್ಲಿ ತ್ಯಾಜ್ಯ ಕಾಣುವಂತಾಗಿದೆ. ಸಾರ್ವ ಜನಿಕರು, ನಾಗರೀಕರು ಸಾಂಕ್ರಾಮಿಕ ರೋಗಕ್ಕೆ ತುತ್ತಾಗುವ ಮುನ್ನವೇ ಸಂಬಂಧಪಟ್ಟ ಇಲಾಖೆಗಳು ಜಿಲ್ಲಾಡಳಿತ ಎಚ್ಚೆತ್ತು ಸಾಂಕ್ರಾಮಿಕ ರೋಗದ ಭಯ ಮುಕ್ತ ಜೀವನ ನಡೆಸಲು ಅನುವು ಮಾಡಕೊಡಲಿ ಎಂಬುದು ಗ್ರಾಮಸ್ಥರ ಅಭಿಪ್ರಾಯ ವಾಗಿದೆ.

ವರದಿ : ರಶ್ಮಿ ಶ್ರೀಕಾಂತ್ ನಾಯಕ್
         ತೀರ್ಥಹಳ್ಳಿ

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು