ಸಿಗಂದೂರು: ದಡ ಸೇರಿಸಿ ದವರ ಬದುಕು ನಡು ನೀರಿನಲ್ಲಿ..?

 

"ಸಿಬ್ಬಂದಿಗಳಿಗೆ ಸಿಗದ ವೇತನವು ಇಲ್ಲ.  ವಸತಿನು ಇಲ್ಲ. ಇವರ ಗೋಳಿಗೆ ಸ್ಪಂದಿಸುವವರ್ಯರಿದ್ದಾರೆ "

ವಿಜಯ ಸಂಘರ್ಷ



ಸಾಗರ : ಶರಾವತಿ ಹಿನ್ನೀರು ಭಾಗದಲ್ಲಿ ಪ್ರವಾಸಿಗರು ಮತ್ತು ಸ್ಥಳೀಯರನ್ನು ಸುರಕ್ಷಿತವಾಗಿ ದಡ ತಲುಪಿಸುವ ಲಾಂಚ್ ಸಿಬ್ಬಂದಿ ಬದುಕು, ನಡು ನೀರಿಗೆ ಬಂದು ನಿಂತಿದೆ. ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಮಂದಗತಿಯಿಂದಾಗಿ ಲಾಂಚ್ ಸಿಬ್ಬಂದಿ ಒಂಭತ್ತು ತಿಂಗಳಿಂದ ಸಂಬಳವಿಲ್ಲದೆ ಪರಿತಪಿಸುತ್ತಿದ್ದಾರೆ. ಅಲ್ಲದೆ ಭವಿಷ್ಯದ ಕುರಿತು ಆತಂಕ ಎದುರಾಗಿದೆ.

ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನಕ್ಕೆ ಬರುವ ಪ್ರವಾಸಿಗರನ್ನು ಹೆಚ್ಚಾಗಿ ಆಕರ್ಷಿಸುವುದು ಶರಾವತಿ ಹಿನ್ನೀರಿನ ಲಾಂಚ್’ಗಳು. ಅಂಬಾರಗೋಡ್ಲು-ಕಳಸವಳ್ಳಿ ಮಧ್ಯೆ ಲಾಂಚ್’ನಲ್ಲಿ ಪ್ರಯಾಣಿಸುವುದೆ ಹಿತ ಅನುಭವ. ಪ್ರವಾಸಿಗರು ಮತ್ತು ಸ್ಥಳೀಯರು ನಿರಂತರವಾಗಿ, ಸುರಕ್ಷಿತವಾಗಿ ದಡಕ್ಕೆ ತಲುಪಿಸುವ ಸಿಬ್ಬಂದಿಗಳು ಈ ವರ್ಷದ ಸಂಬಳವನ್ನೇ ಕಂಡಿಲ್ಲ.

ಶರಾವತಿ ಹಿನ್ನೀರು ಭಾಗದ ಅಂಬಾರಗೋಡ್ಲು – ಕಳಸವಳ್ಳಿ, ಹಸಿರುಮಕ್ಕಿ, ಮುಪ್ಪಾನೆ ಭಾಗದಲ್ಲಿ ಲಾಂಚ್’ಗಳು ಕಾರ್ಯನಿರ್ವಹಿಸುತ್ತಿವೆ.19 ಸಿಬ್ಬಂದಿಗಳು ಲಾಂಚ್’ನಲ್ಲಿ ಕೆಲಸ ಮಾಡುತ್ತಿದ್ದಾರೆ. ಎಲ್ಲರೂ ಗುತ್ತಿಗೆ ಆಧಾರದ ನೌಕರರು. ಪ್ರತಿದಿನ ಸೇವೆ ಒದಗಿಸುವುದು ಅನಿವಾರ್ಯ. ಕೆಲವು ಸಂದರ್ಭ ಹೆಚ್ಚುವರಿ ಅವಧಿ ಕರ್ತವ್ಯ ನಿರ್ವಹಿಸಬೇಕು. ಹೀಗಿದ್ದೂ, ಈ ಸಿಬ್ಬಂದಿಗಳು 2021ರಲ್ಲಿ ಒಂದೇ ಒಂದು ತಿಂಗಳು ಸಂಬಳ ಪಡೆದಿಲ್ಲ.

ಲಾಂಚ್ ಸಿಬ್ಬಂದಿಗಳು ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಗುತ್ತಿಗೆ ನೌಕರರಾಗಿದ್ದಾರೆ. 2021ರ ಜನವರಿ ತಿಂಗಳಿಂದ ಇವರ ವೇತನಕ್ಕೆ ಇಲಾಖೆಯು ಹಣ ಬಿಡುಗಡೆ ಮಾಡಿಲ್ಲ. GST ಗೊಂದಲದಿಂದಾಗಿ ಹಣ ಬಿಡುಗಡೆಯಾಗಿಲ್ಲ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಈಗ ಹೊಸ ಬಿಲ್ ಸಿದ್ಧಪಡಿಸಲಾಗಿದ್ದು, ಇನ್ನೊಂದು ವಾರದಲ್ಲಿ ವೇತನ ಬಿಡುಗಡೆ ಆಗಬಹುದು ಎಂದು ಸಮಜಾಯಿಷಿ ನೀಡುತ್ತಿದ್ದಾರೆ.

19 ಸಿಬ್ಬಂದಿಯ ಒಟ್ಟು ವೇತನ 2 ಲಕ್ಷಕ್ಕಿಂತಲೂ ಕಡಿಮೆ ಇದೆ. ಹಾಗಾಗಿ 2 ಲಕ್ಷಕ್ಕಿಂತಲೂ ಕಡಿಮೆ ವೇತನವಿದ್ದರೆ ಜಿಎಸ್’ಟಿ ಪರಿಗಣಿಸುವ ಅಗತ್ಯವಿಲ್ಲ ಎಂದು ಭಾವಿಸಿದ ಅಧಿಕಾರಿಗಳು ಬಿಲ್ ಮಾಡಿದ್ದಾರೆ. ಆದರೆ ಖಜಾನೆ ಇಲಾಖೆ ಅಧಿಕಾರಿಗಳು 2 ಲಕ್ಷಕ್ಕಿಂತಲೂ ಕಡಿಮೆ ವೇತನವಿದ್ದರೂ ಜಿಎಸ್’ಟಿ ಕಡಿತ ಅಗತ್ಯ ಎಂಬ ನಿಯಮ ಸೂಚಿಸಿದ್ದಾರೆ. ಇದರಿಂದಾಗಿ ಒಂಭತ್ತು ತಿಂಗಳ ವೇತನ ಲಾಂಚ್ ಸಿಬ್ಬಂದಿ ಕೈಸೇರದಂತಾಗಿದೆ.

ಲಾಂಚ್ ಸಿಬ್ಬಂದಿಗಳಿಗೆ ವಸತಿ ಸೌಲಭ್ಯ ಕಲ್ಪಿಸುವ ಕುರಿತು ಚಿಂತನೆಯಾಗಿತ್ತು. ಜನಪ್ರತಿನಿಧಿಗಳು ಕೂಡ ಈ ಕುರಿತು ಪ್ರಯತ್ನ ಮಾಡಿದ್ದರು. ಆದರೆ ಈಗ ಅದೂ ಮರೀಚಿಕೆಯಾಗುವ ಸಾಧ್ಯತೆ ಇದೆ. ಅಂಬಾರಗೋಡ್ಲು ಮತ್ತು ಕಳಸವಳ್ಳಿ ಸಂಪರ್ಕ ಸೇತುವೆ ನಿರ್ಮಿಸಲಾಗುತ್ತಿದೆ. ಹಾಗಾಗಿ ಲಾಂಚ್ ಸಿಬ್ಬಂದಿಗೆ ವಸತಿ ಸೌಲಭ್ಯ ಕೊಡುವ ಅಗತ್ಯವಿಲ್ಲ ಎಂದು ಇಲಾಖೆ ಅಧಿಕಾರಿಗಳು ಯೋಚಿಸುತ್ತಿದ್ದಾರೆ.

ಸಿಗಂದೂರಿಗೆ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಾಣವಾದರೆ ಲಾಂಚ್ ಸೇವೆ ಹಂತ ಹಂತವಾಗಿ ಸ್ಥಗಿತವಾಗ ಬಹುದು ಅಥವಾ ಲಾಂಚ್’ಗಳ ಸಂಖ್ಯೆ ಕಡಿತಗೊಳ್ಳುವ ಸಾಧ್ಯತೆ ಇದೆ. ಹಾಗಾಗಿ ಲಾಂಚ್ ಸಿಬ್ಬಂದಿ ಆತಂಕದಿಂದಲೇ ದಿನ ದೂಡುವಂತಾಗಿದೆ. ಈ ಮಧ್ಯೆ ವೇತನವು ಸರಿಯಾಗಿ ಕೈಸೇರದೆ ಜೀವನ ನಡೆಸುವುದಕ್ಕೆ ಕಷ್ಟಪಡು ವಂತಾಗಿದೆ. ಪ್ರತಿದಿನ ಸಾವಿರಾರು ಜನರನ್ನು ಸುರಕ್ಷಿತವಾಗಿ ದಡ ಸೇರಿಸುತ್ತಿರುವ ಲಾಂಚ್ ಸಿಬ್ಬಂದಿಯ ಜೀವನವನ್ನು ಸರ್ಕಾರ ದಡಕ್ಕೆ ಸೇರಿಸುವ ಅಗತ್ಯವಿದೆ.

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು