ವಿಜಯ ಸಂಘರ್ಷ
ಭದ್ರಾವತಿ: ಕೇಂದ್ರ ಸರ್ಕಾರ ದೇಶದಲ್ಲಿ ಬಂಡವಾಳಶಾಹಿಗಳಿಗೆ ಮಣೆ ಹಾಕುವ ಮೂಲಕ ಶ್ರೀಸಾಮಾನ್ಯರ ಬಗೆಗಿನ ಕಾಳಜಿಯಿಂದ ವಿಮುಖವಾಗುತ್ತಿದೆ ಎಂದು ಸಿಪಿಐ(ಎಂ)ರಾಜ್ಯ ಸಮಿತಿ ಸದಸ್ಯ ಡಾ.ಕೆ.ಪ್ರಕಾಶ್ ಆರೋಪಿಸಿದರು.
ನಗರದ ನ್ಯೂಟೌನ್ ಲಯನ್ಸ್ ಕ್ಲಬ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಭಾರತ ಕಮ್ಯುನಿಸ್ಟ್ ಪಕ್ಷದ 23 ನೇ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ 2 ವರ್ಷಗಳಿಂದ ಮಹಾಮಾರಿ ಕೋವಿಡ್-19 ರ ಪರಿಣಾಮ ಪ್ರಪಂಚದಾದ್ಯಂತ ಶ್ರೀಸಾಮಾನ್ಯರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ನಡುವೆ ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ಸೇರಿದಂತೆ ಶ್ರೀಸಾಮಾನ್ಯರಿಗೆ ಅಗತ್ಯವಿರುವ ದಿನ ಬಳಕೆ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಈಗಲೂ ತೆರಿಗೆ ಪ್ರಮಾಣ ಇಳಿಸಿ ಶ್ರೀಸಾಮಾನ್ಯ ರಿಗೆ ಅನುಕೂಲ ಮಾಡಿಕೊಡುವ ಬಗ್ಗೆ ಚಿಂತಿಸದೆ ಬಂಡವಾಳಶಾಹಿಗಳ ಪರವಾಗಿ ನಡೆದುಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದಲ್ಲಿ ಬಂಡವಾಳಶಾಹಿಗಳಿಗೆ ಮಣೆಹಾಕುತ್ತಿರುವ ಪರಿಣಾಮ ಎಲ್ಲಾ ಕ್ಷೇತ್ರಗಳು ಬಂಡವಾಳಶಾಹಿಗಳ ಹಿಡಿತಕ್ಕೆ ಒಳಗಾಗುತ್ತಿವೆ. ಹಂತ ಹಂತವಾಗಿ ಬಂಡವಾಳಶಾಹಿಗಳು ತಮ್ಮ ಪ್ರಾಬಲ್ಯ ಹೆಚ್ಚಿಸಿಕೊಳ್ಳು ತ್ತಿದ್ದಾರೆ. ಇದರಿಂದಾಗಿ ದೇಶದಲ್ಲಿ ಶ್ರೀಸಾಮಾನ್ಯರು ಹಲವು ರೀತಿಯ ಸಂಕಷ್ಟಗಳನ್ನು ಎದುರಿಸುವಂತಾಗಿದೆ ಎಂದರು.
ಪ್ರಸ್ತುತ ಕೋವಿಡ್ ಲಸಿಕೆ ನೀಡುವ ವಿಚಾರದಲ್ಲೂ ಕೇಂದ್ರ ಸರ್ಕಾರ ನಿರ್ಲಕ್ಷ್ಯತನ ವಹಿಸುತ್ತಿದೆ. ದೇಶದಲ್ಲಿ ಎಲ್ಲರಿಗೂ 1 ಮತ್ತು 2 ನೇ ಡೋಸ್ ಲಸಿಕೆ ನೀಡುವುದು ಅನಿವಾರ್ಯ ವಾಗಿದೆ. ಆದರೆ ಇದೀಗ ನಿಗದಿತ ಸಮಯದಲ್ಲಿ ಅಗತ್ಯವಿರುವಷ್ಟು ಲಸಿಕೆ ಒದಗಿಸಿಟ್ಟುಕೊಳ್ಳುವಲ್ಲಿ ಹಿನ್ನಡೆ ಅನುಭವಿಸುತ್ತಿದೆ ಎಂದು ಆರೋಪಿಸಿದರು.
ನ್ಯಾಯವಾದಿ ಜಿ.ಎಸ್ ನಾಗರಾಜ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಮಿತಿ ಕಾರ್ಯದರ್ಶಿ ಎಂ. ನಾರಾಯಣ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸದಸ್ಯ ಅನಂತರಾಮು ಸ್ವಾಗತಿಸಿದರು.
ಸಿಪಿಐ(ಎಂ) ಜಿಲ್ಲಾ ಸಮಿತಿ ಸದಸ್ಯರಾದ ಕೆ. ಪ್ರಭಾಕರನ್, ಕೆ. ಮಂಜಣ್ಣ, ಬಿಸಿಯೂಟ ನೌಕರರ ಸಂಘದ ಹನುಮಮ್ಮ, ಅಂಗನವಾಡಿ ನೌಕರರ ಸಂಘದ ತುಳಸಿಪ್ರಭಾ ವೇದಿಕೆಯಲ್ಲಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಕರೆ ಮಾಡಿ +91 9743225795