ನರ್ಸಿಂಗ್‌ 24 ವಿದ್ಯಾರ್ಥಿ ಗಳಿಗೆ ಕೊರೊನಾ ಸೋಂಕು: ಆಸ್ಪತ್ರೆ ಸೀಲ್‌ ಡೌನ್‌

 

ವಿಜಯ ಸಂಘರ್ಷ



ಭದ್ರಾವತಿ: ಹಳೇ ನಗರದ ನಿರ್ಮಲಾ ಆಸ್ಪತ್ರೆಯ 24 ಮಂದಿ ನರ್ಸಿಂಗ್‌ ವಿದ್ಯಾರ್ಥಿಗಳಿಗೆ ಕೊರೊನಾ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಆಸ್ಪತ್ರೆ ಮತ್ತು ನರ್ಸಿಂಗ್‌ ಹಾಸ್ಟೆಲ್‌ ಅನ್ನು ಗುರುವಾರ ಬೆಳಗ್ಗೆ ಸೀಲ್‌ಡೌನ್‌ ಮಾಡಲಾಗಿದೆ. ಸೋಕಿತರನ್ನು ಆಸ್ಪತ್ರೆ ಒಳ ಭಾಗದಲ್ಲಿ ಐಸೋಲೇಷನಲ್ಲಿ ಇರಿಸಲಾಗಿದ್ದು, ಆಸ್ಪತ್ರೆ ಹೊರ ಭಾಗದಲ್ಲಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿದೆ.
ಕಳೆದ ವಾರ ಶಿವಮೊಗ್ಗದಲ್ಲಿ ನರ್ಸಿಂಗ್‌ ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಎಚ್ಚೆತ್ತುಕೊಂಡು ನಂಜಪ್ಪ ಲೈಫ್‌ ಕೇರ್‌ ಆಸ್ಪತ್ರೆಯಲ್ಲಿ ಪರೀಕ್ಷೆ ಬರೆದಿದ್ದ ನಿರ್ಮಲಾ ಆಸ್ಪತ್ರೆಯ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಓರ್ವ ವಿದ್ಯಾರ್ಥಿಗೆ ಸೋಂಕು ಕಾಣಿಸಿಕೊಂಡಿತ್ತು.

ನಂತರ 2 ನೇ ಹಂತದಲ್ಲಿ ಕೊರೊನಾ ಸೋಂಕು ಪರೀಕ್ಷೆ ಮಾಡಿದಾಗ 24 ವಿದ್ಯಾರ್ಥಿಗಳಲ್ಲಿ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಆದೇಶದಂತೆ ಹಾಗೂ ಡಿಎಚ್‌ಓ ಮಾರ್ಗದರ್ಶನದಲ್ಲಿ ಬೆಳಗ್ಗೆ 9 ಗಂಟೆಗೆ ತಹಸೀಲ್ದಾರ್‌ ಆರ್‌.ಪ್ರದೀಪ್‌, ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್‌, ನಗರಸಭಾ ಪೌರಾಯುಕ್ತ ಪರಮೇಶ್‌ ಮತ್ತು ಸಿಬ್ಬಂದಿ ಪೊಲೀಸ್‌ ಬಂದೋಬಸ್ತ್‌ನೊಂದಿಗೆ ತೆರಳಿ ಆಸ್ಪತ್ರೆಯನ್ನು ಸೀಲ್‌ಡೌನ್‌ ಮಾಡಿದ್ದಾರೆ.

ಸೋಕಿತರೆಲ್ಲರನ್ನೂ ಆಸ್ಪತ್ರೆಯಲ್ಲಿ ಐಸೋಲೇಷನ್‌ ಮಾಡಲಾಗಿದೆ. ಆಸ್ಪತ್ರೆಗೆ ಯಾರೂ ಒಳ ಪ್ರವೇಶಿ ಸದಂತೆ ಬಂದ್‌ ಮಾಡಿ, ಸ್ಯಾನಿಟೈಸ್‌ ಮಾಡಲಾಗುತ್ತದೆ. ಆಸ್ಪತ್ರೆಯ ವೈದ್ಯರನ್ನು ಮತ್ತು ಸಿಬ್ಬಂದಿಯನ್ನು ಪರೀಕ್ಷಿಸಲಾಗುತ್ತಿದೆ. ಒಳ ರೋಗಿಗಳ ಬಗ್ಗೆ ಎಚ್ಚರ ವಹಿಸಲಾಗಿದೆ. ಓಮಿಕ್ರಾನ್‌ ಸೋಂಕಿನ ಪರೀಕ್ಷೆಗೂ ಕಳುಹಿಸಿ ಕೊಡಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್‌ ತಿಳಿಸಿದರು.

ಉಪ ವಿಭಾಗಾಧಿಕಾರಿ ಡಾ. ಟಿ. ವಿ. ಪ್ರಕಾಶ್‌ ಸ್ಪಷ್ಟನೆ: ಶಿವಮೊಗ್ಗದ ನಂಜಪ್ಪ ಲೈಫ್‌ ಕೇರ್‌ ಆಸ್ಪತ್ರೆಯಲ್ಲಿ 172 ಮಂದಿ ನರ್ಸಿಂಗ್‌ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅವರೆಲ್ಲರನ್ನು ಪರೀಕ್ಷಿಸಿದಾಗ ಒಬ್ಬ ವಿದ್ಯಾರ್ಥಿನಿಗೆ ಸೋಂಕು ಕಂಡು ಬಂದಿತ್ತು. 2 ನೇ ಬಾರಿ ಪರೀಕ್ಷಿದಾಗ ಯಾರಲ್ಲೂ ಸೋಂಕು ಕಂಡು ಬಂದಿಲ್ಲ. ನಂತರ 3 ಮತ್ತು 4 ನೇ ಅವಧಿಯಲ್ಲಿ ಪರೀಕ್ಷಿಸಿದಾಗ 172 ಮಂದಿ ವಿದ್ಯಾರ್ಥಿಗಳ ಪೈಕಿ 24 ಮಂದಿಗೆ ಸೋಂಕಿರುವುದು ಕಂಡು ಬಂದಿದೆ.
ಇದರಿಂದಾಗಿ ನರ್ಸಿಂಗ್‌ ಕಾಲೇಜು, ಹಾಸ್ಟೆಲ್‌, ಆಸ್ಪತ್ರೆಯನ್ನು ಸೀಲ್‌ ಡೌನ್‌ ಮಾಡಲಾಗಿದೆ. ಆಸ್ಪತ್ರೆಯಲ್ಲಿ 165 ಮಂದಿ ಒಳ ರೋಗಿಗಳು ಮತ್ತು ವೈದ್ಯರು ಹಾಗೂ ಸಿಬ್ಬಂದಿಯನ್ನು ಸಹ ಪರೀಕ್ಷೆಗೆ ಒಳಪಡಿಸಲಾಗಿದೆ. ಇವರಲ್ಲಿ ಯಾರಿಗಾದರೂ ಪಾಸಿಟಿವ್‌ ಕಂಡು ಬಂದಲ್ಲಿ ಅವರೆಲ್ಲರ ಟ್ರಾವೆಲ್‌ ಹಿಸ್ಟರಿ ಪಡೆಯಲಾಗುತ್ತದೆ ಎಂದು ಉಪ ವಿಭಾಗಾಧಿಕಾರಿ ಡಾ. ಟಿ. ವಿ. ಪ್ರಕಾಶ್‌ ತಿಳಿಸಿದರು. ತಹಸೀಲ್ದಾರ್‌ ಆರ್‌. ಪ್ರದೀಪ್‌ ಉಪಸ್ಥಿತರಿದ್ದರು.

ಸುದ್ದಿ ಹಾಗೂ ಜಾಹೀರಾತಿಗಾಗಿ ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು