ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರಿಂದ ಪ್ರತಿಭಟನೆ

ವಿಜಯ ಸಂಘರ್ಷ
ಭದ್ರಾವತಿ: ತಾಲ್ಲೂಕಿನ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿ ಯರು ಗೌರವಧನ ಹಾಗೂ ರಾಜ್ಯ ಸರ್ಕಾರದ 6ನೇ ಗ್ಯಾರಂಟಿಯನ್ನು ಸರ್ಕಾರ ತಕ್ಷಣ ಜಾರಿಗೊಳಿಸುವಂತೆ ಆಗ್ರಹಿಸಿ ಸಂಘದ ಗೌರವಾಧ್ಯಕ್ಷೆ ಸುಶೀಲಬಾಯಿ ನೇತೃತ್ವದಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ನಗರದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ ದಿಂದ ಮೆರವಣಿಗೆ ನಡೆಸಿದ ಪ್ರತಿಭಟನಾ ಕಾರರು ತಹಸೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ನಂತರ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಕಳೆದ 48 ವರ್ಷಗಳಿಂದ ಶೂನ್ಯದಿಂದ 6 ವರ್ಷ ವಯೋಮಾನದ ಮಕ್ಕಳಿಗಾಗಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಮೂಲಕ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಆರೋಗ್ಯ ಲಾಲನೆ-ಪಾಲನೆ ಪೌಷ್ಠಿಕ ಆಹಾರ ಶಾಲಾ ಪೂರ್ವ ಶಿಕ್ಷಣ ಇತ್ಯಾದಿ ಸೇವೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಅದರೆ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಎಲ್ಲಿ ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿ ಸುತ್ತಿವೆಯೊ ಅದೇ ಪ್ರದೇಶಗಳಲ್ಲಿ ಶಿಶುಪಾಲನ ಕೇಂದ್ರಗಳನ್ನು ಶಾಲಾ ಪೂರ್ವ ತರಗತಿ ಗಳನ್ನು ಪ್ರಾರಂಭಿಸಲು ಮುಂದಾಗಿ ರುವುದು ದುರದೃಷ್ಟಕರ. ಅಂಗನವಾಡಿ ಕೇಂದ್ರಗಳ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಈಗಾಗಲೇ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಆಶ್ರಯದಲ್ಲಿ ಶಿಶುಪಾಲನ ಕೆಂದ್ರಗಳನ್ನು ಪ್ರಾರಂಭಿಸಲಾಗುತ್ತಿದೆ.

ಸಮಗ್ರ ಶಿಕ್ಷಣ- ಕರ್ನಾಟಕವು ಸರ್ಕಾರಿ ಶಾಲೆಗಳಲ್ಲಿ 4ರಿಂದ 5 ವರ್ಷದ ವಯೋಮಾನದ ಮಕ್ಕಳಿಗಾಗಿ ಶಾಲಾ ಪೂರ್ವ ತರಗತಿಗಳನ್ನು ಪ್ರಾರಂಭಿಸಲು ಆದೇಶ ನೀಡಲಾಗಿದ್ದು ಎಲ್‌ಕೆಜಿ-ಯುಕೆಜಿ ತರಗತಿಗಳನ್ನು ಆರಂಭಿಸಲಾಗುತ್ತಿದೆ ಅದೇ ಗ್ರಾಮೀಣಾ ಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನರೇಗಾ ಯೋಜನೆ ಯಡಿ ಗ್ರಾಮ ಪಂಚಾಯತಿ ವ್ಯಾಪ್ತಿಗಳಲ್ಲಿ ಶಿಶುಪಾಲನ ಕೇಂದ್ರಗಳನ್ನು ಪ್ರಾರಂಭಿಸಲು ಸಿದ್ದತೆಗಳನ್ನು ನಡೆಸ ಲಾಗಿದೆ.ಈ ಬಗ್ಗೆ ಆಯಾ ಇಲಾಖೆಗಳು ಸುತ್ತೋಲೆಗಳನ್ನು ಹೊರಡಿಸಿರುವುದು ಅಂಗನವಾಡಿ ಕಾರ್ಯಕರ್ತೆಯರು ನಿರ್ವಹಿಸುವ ಕಾರ್ಯಗಳು ಪರ್ಯಾಯ ವಾಗಿ ಮಾರ್ಪಟ್ಟು ಅಂಗನವಾಡಿಗಳನ್ನು ಮುಚ್ಚುವ ಸಂಚು ನಡೆಸಲಾಗುತ್ತದೆ ಎಂದು ದೂರಿದರು.

6ನೇ ಗ್ಯಾರಂಟಿ ಜಾರಿ ಮಾಡಿ:

ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ಅಂಗನವಾಡಿ ಕಾರ್ಯಕರ್ತೆ ಯರಿಗೆ 15 ಸಾವಿರ ಹಾಗೂ ಸಹಾಯಕಿ ಯರಿಗೆ 10 ಸಾವಿರ ಸಹಾಯಧನ ಹೆಚ್ಚಿಸುವ ಬಗ್ಗೆ ಭರವಸೆ ನೀಡಿತ್ತು. ರಾಜ್ಯ ಸರ್ಕಾರ ತಮ್ಮ 6ನೇ ಗ್ಯಾರಂಟಿಯಲ್ಲಿ ಘೋಷಿಸಿದ ಧನ ಸಹಾಯ ಜಾರಿ ಕೂಡಲೇ ಮಾಡಬೇಕು ಹಾಗೂ ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರಿಗೆ ಸಹಾಯಕಿಯರಿಗೆ ಗ್ರಾಚ್ಯುಟಿ ಪಡೆಯಲು ಅರ್ಹರಾಗಿದ್ದು ನಿವೃತ್ತಿ ವೇತನ ಜಾರಿಗೊಳಿಸಬೇಕೆಂಬ ಹತ್ತು ಹಲವು ಬೇಡಿಕೆಗಳಿದ್ದು ಅವುಗಳನ್ನು ಸರ್ಕಾರ ತಕ್ಷಣ ಜಾರಿ ಮಾಡಬೇಕೆಂದು ಅಗ್ರಹಿಸಿದರು.

ಪ್ರತಿಭಟನೆಯಲ್ಲಿ ತಾಲ್ಲೂಕು ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಆರ್. ವೇದಾವತಿ, ಉಪಾಧ್ಯಕ್ಷೆ ಇಂದ್ರಾಬಾಯಿ, ಪ್ರಧಾನ ಕಾರ್ಯದರ್ಶಿ ಕೆ. ಸಿ. ವಿಶಾಲ, ಖಜಾಂಚಿ ಕೆ. ಆರ್. ಮೀನಾಕ್ಷಿ ಸೇರಿದಂತೆ ನೂರಾರು ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು