ಭದ್ರಾ ಡ್ಯಾಮ್ ನಿಂದ ನಾಲೆಗಳಿಗೆ ಹರಿಸಲಾಗುತ್ತಿರುವ ನೀರನ್ನು ಸ್ಥಗಿತಗೊಳಿಸಲು ರೈತರ ಆಗ್ರಹ

ವಿಜಯ ಸಂಘರ್ಷ
ಭದ್ರಾವತಿ: ಭದ್ರಾ ಜಲಾಶಯದಿಂದ ನಾಲೆಗಳಿಗೆ ಹರಿಸಲಾಗುತ್ತಿರುವ ನೀರನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ ವತಿಯಿಂದ ಭದ್ರಾವತಿಯ ಮಿಲ್ಟ್ರಿಕ್ಯಾಂಪ್ ಬಳಿಯ ನೀರಾವರಿ ಇಲಾಖೆ ಕಚೇರಿ ಮುಂಭಾಗದಲ್ಕಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಸೆ.6ರಂದು ನಡೆದ ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಸಭೆಯಲ್ಲಿ, ನೀರು ಹರಿಸಲು ಆಫ್ ಅಂಡ್ ಆನ್ ಪದ್ದತಿ ಅನುಸರಿಸಲು ತೀರ್ಮಾನಿಸಲಾಗಿತ್ತು. ಈ ತೀರ್ಮಾನದಂತೆ ಸೆ.16 ರಂದು ಡ್ಯಾಂನಿಂದ ಬಿಡಲಾಗುತ್ತಿದ್ದ ನೀರನ್ನು ಸ್ಥಗಿತಗೊಳಿಸಬೇಕು ಎಂದು‌ ರೈತರು ಆಗ್ರಹಿಸಿದರು.

ಈಗ ನೀರು ನಿಲ್ಲಿಸದಿದ್ದರೆ ಮುಂಬರುವ ಬೇಸಿಗೆ ವೇಳೆ, ನೀರಿನ ಕೊರತೆಯಿಂದ ಅಡಿಕೆ ತೋಟಗಳಿಗೆ ದುಃಸ್ಥಿತಿ ಎದುರಾಗುತ್ತದೆ. ಆದ್ದರಿಂದ ತಕ್ಷಣವೇ ಡ್ಯಾಂನಿಂದ ಹೊರ ಬಿಡುತ್ತಿರುವ ನೀರನ್ನು ಸ್ಥಗಿತಗೊಳಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಂದು ಬೃಹತ್ ಪ್ರಮಾಣದ ಹೋರಾಟ ನಡೆಸುವುದು ಅನಿವಾರ್ಯ ವಾಗಲಿದೆ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಶಾಸಕ ಬಿ.ಕೆ.ಸಂಗಮೇಶ್ವರ್, ಉದ್ಯಮಿ ಬಿ.ಕೆ.ಜಗನ್ನಾಥ್, ಸಂಘಟನೆಯ ರಾಜ್ಯ ಉಪಾಧ್ಯಕ್ಷ ಟಿ.ಎಂ. ಚಂದ್ರಪ್ಪ, ಜಿಲ್ಲಾಧ್ಯಕ್ಷ ಎಸ್.ಶಿವಮೂರ್ತಿ, ಜಿಲ್ಲಾ ಕಾರ್ಯಾಧ್ಯಕ್ಷ ಕೆ.ರಾಘವೇಂದ್ರ, ಜಿಲ್ಲಾ ಕಾರ್ಯದರ್ಶಿ ಗುರುಶಾಂತ, ಭದ್ರಾವತಿ ತಾಲೂಕು ಘಟಕದ ಅಧ್ಯಕ್ಷರಾದ ಜಿ.ಎನ್ ಪಂಚಾಕ್ಷರಿ, ಪ್ರಧಾನ ಕಾರ್ಯದರ್ಶಿ ಸಿ.ಬಿ ಹನುಮಂತಪ್ಪ, ಕೆ.ಎಚ್ ಪ್ರಕಾಶ್, ಎಂ.ಎಚ್ ಬಸವನಗೌಡ, ಕಾರ್ಯದರ್ಶಿ ಹೆಚ್.ಜೆ ಮಂಜುನಾಥ್, ಶಿವಮೊಗ್ಗ ತಾಲೂಕು ಘಟಕದ ಅಧ್ಯಕ್ಷ ಸಿ.ಚಂದ್ರಪ್ಪ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು