ಕನ್ನಡ ಭಾಷೆಯು ಶ್ರೀಮಂತ ಸಾಹಿತ್ಯ ಸಾಂಸ್ಕೃತಿಕ ಪರಂಪರೆ

ವಿಜಯ ಸಂಘರ್ಷ
ಶಿವಮೊಗ್ಗ: ಕನ್ನಡ ಭಾಷೆಯು ಶ್ರೀಮಂತ ಸಾಹಿತ್ಯ ಸಾಂಸ್ಕೃತಿಕ ಪರಂಪರೆಯಾಗಿದ್ದು, ಐತಿಹಾಸಿಕವಾಗಿ ವಿಶೇಷ ಸ್ಥಾನಮಾನ ಹೊಂದಿದೆ. ಪ್ರತಿಯೊಬ್ಬರ ಮನೆಗಳಲ್ಲೂ ಕನ್ನಡ ಹೆಚ್ಚು ಬಳಸಬೇಕು ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯ ಕುಮಾರ್ ಹೇಳಿದರು.

ನಗರದ ಎನ್‌ಡಿವಿ ಹಾಸ್ಟೆಲ್ ಆವರಣ ದಲ್ಲಿ ನವಕರ್ನಾಟಕ ನಿರ್ಮಾಣ ವೇದಿಕೆ, ಜಿಲ್ಲಾ ಒಕ್ಕಲಿಗರ ಒಕ್ಕೂಟದ ವತಿಯಿಂದ ಆಯೋಜಿಸಿದ್ದ “ಸಾಧಕರಿಗೆ, ರೈತರಿಗೆ ಸನ್ಮಾನ, ಸಾಂಸ್ಕೃತಿಕ ನೃತ್ಯ ಸ್ಪರ್ಧೆ”ಗೆ ಚಾಲನೆ ನೀಡಿ ಮಾತನಾಡಿದರು.

ಕನ್ನಡ ಭಾಷೆ ಸಾವಿರಾರು ವರ್ಷಗಳ ಹಿನ್ನೆಲೆ ಹೊಂದಿರುವ ಪ್ರಾಚೀನ ಭಾಷೆಯಾಗಿದ್ದು, ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ಹಂತದಲ್ಲಿಯೇ ಕನ್ನಡ ಭಾಷೆಯ ಕಲಿಕೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಕನ್ನಡ ಭಾಷೆಯನ್ನು ಎಲ್ಲರೂ ತಪ್ಪದೇ ಬಳಸಬೇಕು ಎಂದು ತಿಳಿಸಿದರು.

ನವಕರ್ನಾಟಕ ನಿರ್ಮಾಣ ವೇದಿಕೆ ಅಧ್ಯಕ್ಷ ಗೋ.ರಮೇಶಗೌಡ ಮಾತನಾಡಿ, ನಮ್ಮ ವೇದಿಕೆಯು ನೂರಾರು ಜನಪರ ಕಾರ್ಯಕ್ರಮ ಗಳನ್ನು ನಡೆಸಿಕೊಂಡು ಬಂದಿದ್ದು, ಸಮಾಜಮುಖಿಯಾಗಿ ಸೇವೆ ಸಲ್ಲಿಸುತ್ತ ಬರುತ್ತಿದೆ. ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಕೆಲಸ ಮಾಡುತ್ತಿದೆ. ನಾಡು ನುಡಿ ಸಂಸ್ಕೃತಿ ಪರಂಪರೆಯ ಕಾರ್ಯಕ್ರಮ ಗಳನ್ನು ನಿರಂತರವಾಗಿ ಆಯೋಜಿಸುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ 27 ಸಾಂಸ್ಕೃತಿಕ ತಂಡಗಳು ಭಾಗವಹಿಸಿ ಕನ್ನಡ ನಾಡು ನುಡಿ ಸಂಸ್ಕೃತಿಯ ಗೀತೆಗಳಿಗೆ ನೃತ್ಯ ಮಾಡಿದರು. ರೈತರು, ಸಾಧಕರಿಗೆ ಸನ್ಮಾನಿಸಲಾಯಿತು.

ಗ್ರೂಪ್ ಡ್ಯಾನ್ಸ್ ನಲ್ಲಿ ಪ್ರಥಮ ಬಹುಮಾನ ಮಹಾವೀರ ಶಾಲೆ, ದ್ವಿತೀಯ ಬಹುಮಾನ ಸೀಮಾ ಆಂಗ್ಲ ಶಾಲೆ, ತೃತೀಯ ಬಹುಮಾನ ಅಭಿನವ ನೃತ್ಯ ತಂಡ, ನಾಲ್ಕನೇ ಬಹುಮಾನ ಡ್ರಾಗನ್ ಪವರ್ ಡ್ಯಾನ್ಸ್ ತಂಡ, 5ನೇ ಬಹುಮಾನ ಅನನ್ಯ ಶಾಲೆಯು ಪಡೆಯಿತು. ಸೋಲೋ ಡಾನ್ಸ್ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ರಮ್ಯಶ್ರೀ, ದ್ವಿತೀಯ ಬಹುಮಾನ ರಾಶಿ ವಿ ಗೌಡ ಹಾಗೂ ಮೂರನೇ ಬಹುಮಾನ ಪೂರ್ವಿಕ ಪಡೆದರು.

ಪ್ರಮುಖರಾದ ಅಭಿನವಗಿರಿ, ಮಂಜುನಾಥ ಎನ್ ಗೌಡ, ಪವನಕುಮಾರ್, ಧೀರರಾಜ್ ಹೊನ್ನವಿಲೆ, ಸಂತೋಷ್, ರವಿಕುಮಾರ್, ಶ್ರೀಪಾಲ್, ಪ್ರತಿಮಾ ಡಾಕಪ್ಪಗೌಡ ಮತ್ತಿತರರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು