ವಿಜಯ ಸಂಘರ್ಷ
ಶಿಕಾರಿಪುರ: ಪುರಸಭೆಯ ವ್ಯಾಪ್ತಿಯ ಆಶ್ರಯ ಬಡಾವಣೆ ನಡುವೆ ಸಂಚರಿಸುವ ಮಾರ್ಗ ಮಧ್ಯದಲ್ಲಿ ಬೀದಿ ದೀಪಗಳಿಲ್ಲದೆ ಹಾಗೂ ಸಂಜೆ ರಾತ್ರಿ ವೇಳೆ ಓಡಾಟಕ್ಕೆ ಅನಾನುಕೂಲ ವಾಗಿದ್ದು ಕೂಡಲೇ ಸರಿಪಡಿಸಲು ಒತ್ತಾಯಿಸಿ ರಾಜ್ಯ ಶಕ್ತಿ ಸಂಗ್ರಾಮ ವೇದಿಕೆವತಿಯಿಂದ ಶನಿವಾರ ಪುರಸಭೆಯ ಅಧಿಕಾರಿ ಭರತ್ ಅವರಿಗೆ ಮನವಿ ಸಲ್ಲಿಸಲಾಯಿತು.
ವೇದಿಕೆ ಅಧ್ಯಕ್ಷ ಆನಂದ್ ಮಾತನಾಡಿ, ಹೊಸ ಸಂತೆ ಮಾರುಕಟ್ಟೆಯ ರಸ್ತೆ ಯಿಂದ ಆಶ್ರಯ ಬಡಾವಣೆಗೆ ಹೋಗುವ ರಸ್ತೆ ಮಾರ್ಗ ಮಧ್ಯದಲ್ಲಿ ಸಾರ್ವಜನಿಕರು ವಿದ್ಯಾರ್ಥಿಗಳು ಮಕ್ಕಳು ಕತ್ತಲಲ್ಲಿ ಓಡಾಡುವುದೇ ದುಸ್ತರ ವಾಗಿದ್ದು, ರಸ್ತೆ ಬದಿಯಲ್ಲಿ ಅಳವಡಿಸಿರುವ ಕಂಬಗಳಲ್ಲಿ ಹಲವು ವರ್ಷಗಳಿಂದ ಬೀದಿ ದೀಪ ಉರಿಯದೆ ಸಂಪೂರ್ಣ ಕತ್ತಲು ಆವರಿಸಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿ ಗಳು ಗಮನಿಸಿ ಬೀದಿ ದೀಪ ಅಳವಡಿಸುವಂತೆ ಒತ್ತಾಯಿಸಿದರು.
ಗುತ್ತಿ ಕನ್ನಪ್ಪ ಮಾತನಾಡಿ ಪುರಸಭೆ ವಿದ್ಯುತ್ ಗುತ್ತಿಗೆದಾರರು ಸಂಪೂರ್ಣ ವಿಫಲರಾಗಿದ್ದು ಬೀದಿ ದೀಪಗಳ ಅಳವಡಿಕೆಗೆ ಸರಿಯಾಗಿ ಕಾರ್ಯ ನಿರ್ವಹಿಸುವಂತೆ ಅಧಿಕಾರಿಗಳು ಸೂಚಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ರವಿ ನಾಯ್ಕ್, ಪರಶುರಾಮ್, ಹಿರೇ ಜಂಬೂರು ತೇಜಸ್, ತಿಮ್ಮರಾಜು, ಅಜಿತ್ ಕುಮಾರ್, ಸುನಿಲ್ ಬನ್ನೂರು, ಶಿವಯ್ಯ ಎನ್ ಶಾಸ್ತ್ರಿ, ಸಂತೋಷ್ ಮತ್ತಿತರರು ಭಾಗವಹಿಸಿದ್ದರು.