ವಿಜಯ ಸಂಘರ್ಷ
ಭದ್ರಾವತಿ: ರಾಜ್ಯದಲ್ಲಿ ಪರ ಭಾಷಿಗರು ವ್ಯಾಪಾರ ವಹಿವಾಟು ಪ್ರದೇಶಗಳಲ್ಲಿ ಕನ್ನಡ ನಾಮಫಲಕ ಹಾಕದೆ ತಾತ್ಸರ ತೋರಿದ್ದರ ವಿರುದ್ದ ಸಮರ ಸಾರಿದ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡರು ಹಾಗೂ ಕಾರ್ಯಕರ್ತರ ಬಂಧನ ಖಂಡಿಸಿ ವೇದಿಕೆಯ ಮಹಿಳಾ ಘಟಕದ ವತಿಯಿಂದ ರಕ್ತದಲ್ಲಿ ಪತ್ರಬರೆದು ಮುಖ್ಯಮಂತ್ರಿಗಳಿಗೆ ಕಳುಹಿಸುವ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಪ್ರಧಾನ ಅಂಚೆ ಕಚೇರಿ ಮುಂಭಾಗ ಮಾತನಾಡಿದ ಕರವೇ ಮಹಿಳಾ ಜಿಲ್ಲಾಧ್ಯಕ್ಷೆ ಜ್ಯೋತಿ ಸೋಮಶೇಖರ್,ಕರ್ನಾಟಕ ಸರ್ಕಾರ ಪೊಲೀಸ್ ವ್ಯವಸ್ಥೆ ಮುಂದಿಟ್ಟು ಕೊಂಡು ಹೋರಾಟಗಾರರನ್ನು ಹತ್ತಿಕ್ಕುವ ಕೆಲಸ ಮಾಡಿದೆ ಎಂದು ಕಿಡಿಕಾರಿದರು.
ಹೊರರಾಜ್ಯದಿಂದ ದುಡಿಮೆಗೆ ಬಂದವರು ಕನ್ನಡ ನಾಡಿನ ಹಣ ಬೇಕು ಆದರೆ ನಾಮಫಲಕ ಹಾಕಲು ನಾಚಿಕೆಯೇ ಎಂದು ಗುಡಿಗಿದ ಅವರು, ಹೋರಾಟಗಾರರನ್ನ ವಿನಃ ಕಾರಣ ಬಂಧಿಸಿರುವುದು ಖಂಡನೀಯ. ರಾಜ್ಯ ಸರ್ಕಾರ ಈ ಕೂಡಲೇ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣ ಗೌಡ ಹಾಗೂ ಕಾರ್ಯಕರ್ತರನ್ನು ಬಿಡುಗಡೆ ಗೊಳಿಸಬೇಕು ಎಂದು ಆಗ್ರಹಿಸಿ ರಕ್ತದಲ್ಲಿ ಬರೆದ ಕಾರ್ಡ್ ಗಳನ್ನು ಅಂಚೆ ಡಬ್ಬಿಗೆ ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ರಕ್ಷಣಾ ವೇದಿಕೆಯ ಮಹಿಳಾ ಜಿಲ್ಲಾ ಘಟಕದ ಪದಾಧಿಕಾರಿ ಗಳಾದ ಎಲ್.ಮಹೇಶ್ವರಿ, ನಾಗರತ್ನ ಎನ್, ಸುಶ್ಮಿತ ಎಚ್.ಡಿ. ಸೇರಿದಂತೆ ಅನೇಕರು ಭಾಗವಹಿಸಿದ್ದರು.