ವಿಜಯ ಸಂಘರ್ಷ
ಭದ್ರಾವತಿ: ಸವಿತಾ ಸಮಾಜದ ಮೂಲ ಪುರುಷ ಸವಿತಾ ಮಹರ್ಷಿಗಳು ಶಿವನ ಬಲಗಣ್ಣಿನಿಂದ ಜನಿಸಿದ್ದಾರೆ. ಆದ್ದರಿಂದ ಸವಿತಾ ಸಮಾಜದವರು ಸೂರ್ಯವಂಶ ದವರು ಎಂದು ಗ್ರೇಡ್- 2 ತಹಸೀಲ್ದಾರ್ ರಂಗಮ್ಮ ಹೇಳಿದರು.
ತಾಲೂಕು ಆಡಳಿತದ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯು ತಾಲೂಕು ಕಚೇರಿಯಲ್ಲಿ ಆಚರಿಸಿದ ಸವಿತಾ ಮಹಿರ್ಷಿ ಜಯಂತಿ ಆಚರಣೆ ಸಮಾರಂಭ ದಲ್ಲಿ ಮಹರ್ಷಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ಸಮಾಜದವರನ್ನು ವೃತ್ತಿಯಿಂದ ನೋಡದೆ ಅವರ ಶ್ರೇಷ್ಟತೆಯಿಂದ ಗುರುತಿಸಬೇಕು. ಸಮಾಜದ ಎಲ್ಲಾ ಜಾತಿ ವರ್ಗಗಳ ಶುಭ ಸಮಾರಂಭಗಳಲ್ಲಿ ಮಂಗಳ ವಾದ್ಯಗಳಿಂದ ಮತ್ತು ಸೌಂದರ್ಯಕ್ಕಾಗಿ ಮುಖ್ಯ ಪಾತ್ರ ವಹಿಸುತ್ತದೆ. ಮುಂದಿನ ದಿನಗಳಲ್ಲಿ ಸಮಾಜದದವರು ಮಹರ್ಷಿಗಳ ಜಯಂತಿ ಆಚರಿಸಲು ಉತ್ಸುಕರಾಗಿ ಮುಂದೆ ಬನ್ನಿ ಎಂದರು.
ಸಮಾಜದ ಸಹ ಕಾರ್ಯದರ್ಶಿ ಮಹೇಶ್ ಕುಮಾರ್ ಮಾತನಾಡಿ, ಪ್ಲಾಸ್ಟಿಕ್ ಸರ್ಜರಿಯ ಕಲ್ಪನೆಯನ್ನು ಪರಿಚಯಿಸಿದ ಹೆಗ್ಗಳಿಕೆ ಸವಿತಾ ಸಮಾಜಕ್ಕಿದೆ, ಆಯುರ್ವೇದ ಸವಿತಾ ಸಮಾಜದ ಉಪ ಕಸುಬು ಎಂಬುದು ಗಮನೀಯ ಸಂಗತಿ. ಅದೇ ರೀತಿ ಸೂರ್ಯವಂಶದ ಮಹರ್ಷಿಗಳು ಚರ್ಮ ರೋಗದ ನಿವಾರಣೆಯಲ್ಲಿ ಮುಖ್ಯಪಾತ್ರ ವಹಿಸಿದ್ದರು. ಸಮಾಜದಲ್ಲಿ ಶಿಕ್ಷಣ ಮತ್ತು ಸಂಘಟನೆಯ ಕೊರತೆ ಹೆಚ್ಚಾಗಿ ಜಾತಿ ನಿಂದನೆಯಿಂದ ಬಳಲುವಂತಾಗಿದೆ. ಆಳುವ ಸರಕಾರಗಳು ಜಾತಿ ನಿಂದನೆಗೆ ಸರಿಯಾದ ಕಾನೂನು ಕ್ರಮ ಜರುಗಿಸಿಲ್ಲವಾದ್ದ ರಿಂದ ಇಂದಿಗೂ ಅತ್ಯಂತ ಹಿಂದುಳಿದ ಸಮಾಜವಾಗಿ ದುರಾಕ್ರಮಣ ಹೆಚ್ಚಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಉಪತಹಸೀಲ್ದಾರ್ ರಾಧಾಕೃಷ್ಣಭಟ್, ಮಂಜಾನಾಯ್ಯ ಅಲೆಕ್ಸ್, ತಾಲೂಕು ಪಂಚಾಯತಿ ಸಹಾಯಕ ನಿರ್ದೇಶಕ ಚೇತನ್, ಸವಿತಾ ಸಮಾಜದ ಗೌರವ ಸಲಹೆಗಾರ ಶಿವಪ್ರಸಾದ್, ಅಧ್ಯಕ್ಷ ವಿಶ್ವನಾಥ್, ವೆಂಕಟೇಶ್, ಮಹೇಶ್, ಸುರೇಶ್, ಹಂಸಲಿಂಗಂ, ಮಧುಮಾಲತಿ, ಬಬಿತಾ ಮುಂತಾದವರಿದ್ದರು. ಶಿವಶಂಕರ್ ಸ್ವಾಗತಿಸಿ ಶಿವಪ್ರಸಾದ್ ವಂದಿಸಿದರು.