ವಿಜಯ ಸಂಘರ್ಷ
ಭದ್ರಾವತಿ: ತಾಲ್ಲೂಕಿನ ಮಾವಿನಕೆರೆ ಗ್ರಾಮದ ಕಿರಿಯ ಪುಷ್ಪ ಸಂತ ತೆರೇಸರ ದೇವಾಲಯದ ವತಿಯಿಂದ ಮಾ.9ರ ಶನಿವಾರ ಶಿಲುಬೆ ಬೆಟ್ಟದ ಮಹೋತ್ಸವ ಹಾಗು ಜೀವಂತ ಶಿಲುಬೆ ಹಾದಿ ಕಾರ್ಯಕ್ರಮ ನಡೆಯಲಿದೆ ಎಂದು ಫಾದರ್ ಸ್ಟೀವನ್ ಡೆನಾ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಸುಮಾರು 2,500ಕ್ಕೂ ಅಧಿಕ ಭಕ್ತರು ಪಾಲ್ಗೊಳ್ಳಲಿದ್ದಾರೆ. ಯೇಸುವನ್ನು ಶಿಲುಬೆಗೇರಿಸಿದ ಇತಿಹಾಸದ ದೃಶ್ಯವನ್ನು ಮರುಸೃಷ್ಟಿಸುವ ಮೂಲಕ ಧಾರ್ಮಿಕತೆಯ ಮಹತ್ವವನ್ನು ಭಕ್ತರಿಗೆ ತಿಳಿಸುವ ಕಾರಣದಿಂದ ಈ ಆಚರಣೆಯನ್ನು ಆಚರಿಸಲಾಗುತ್ತಿದೆ ಎಂದರು.
ಮೊದಲು ದುಷ್ಟರನ್ನು ಶಿಲುಬೆಗೇರಿಸುವುದು ಕ್ರಮವಾಗಿತ್ತು. ಆದರೆ ಯೇಸುವನ್ನು ಶಿಲುಬೆಗೇರಿಸಿದ್ದು, ಸತ್ಯ ಮತ್ತು ಒಳ್ಳೆಯ ತನವನ್ನು ಶಿಲುಬೆಗೇರಿಸಿದ ಪ್ರತೀಕವಾಯಿತು. ಈ ಕಾರಣದಿಂದ ಯೇಸುವಿನ ಮರಣದ ನಂತರ ಶಿಲುಬೆ ವಿಜಯದ ಸಂಕೇತವಾಗಿದೆ. ಆದ್ದರಿಂದ ಕ್ರೈಸ್ತರು ಶಿಲುಬೆಯನ್ನು ಪೂಜಿಸುವುದು ಎಂದು ತಿಳಿಸಿದರು.
ಇಂತಹದೊಂದು ಐತಿಹಾಸಿಕ ಘಟನೆಯನ್ನು ಮತ್ತು ಇತಿಹಾಸವನ್ನು ಜನರಿಗೆ ಪರಿಚಯಿಸುವ ನಿಟ್ಟಿನಲ್ಲಿ ಜಿವಂತ ಶಿಲುಬೆ ಹಾದಿ ಕಾರ್ಯಕ್ರಮ ಆಚರಿಸಲಾಗುತ್ತಿದೆ.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕೋರಿದರು.
ಕಾರ್ಯಕ್ರಮದ ಮಾಹಿತಿ ನೀಡಿದ ಕ್ರೈಸ್ತ ಸಮಾಜದ ಮುಖಂಡ ಅಂತೋಣಿ ವಿಲ್ಸನ್, ಮಾ.9ರ ಶನಿವಾರ ಬೆ.10ಗಂಟೆಗೆ ಮಾವಿನಕೆರೆಯಲ್ಲಿ ಜೀವಂತ ಶಿಲುಬೆ ಹಾದಿ ಕಾರ್ಯಕ್ರಮ ಆರಂಭಗೊಳ್ಳಲಿದೆ, 12 ಗಂಟೆಗೆ ಬಲಿಪೂಜೆ, 12.30ಕ್ಕೆ ಶಿಲುಬೆಯ ಸನ್ಮಾನ,
1 ಗಂಟೆಗೆ ಅನ್ನ ಸಂತರ್ಪಣೆ ನಡೆಯಲಿದೆ. ಕಾರ್ಯಕ್ರಮಕ್ಕೆ ತೆರಳಲು ಬೆ.8 ಮತ್ತು 9 ಗಂಟೆಗೆ ಭದ್ರಾವತಿ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಿಂದ ಬಸ್ ವ್ಯವಸ್ಥೆ ಒದಗಿಸಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಧರ್ಮಗುರುಗಳಾದ ಫಾ.ವಿನ್ಸೆಂಟ್ ಸೆರಾವೊ, ಫಾ.ಲ್ಯಾನ್ಸಿ ಡಿಸೋಜ, ಫಾ.ಡಾಮಿನಿಕ್, ಫಾ.ಸಂತೋಷ್ ಅಲ್ಮೇಡ, ಫಾ.ಅಂತೋಣಿ ಥಾಮಸ್, ನಗರಸಭೆ ಸದಸ್ಯ ಜಾರ್ಜ್, ಮಾಜಿ ಸದಸ್ಯ ಪ್ರಾನ್ಸಿಸ್, ಯುನೆಟೆಡ್ ಕ್ರಿಶ್ಚಿಯನ್ ಅಸೋಸಿಯೇಷನ್ ಅಧ್ಯಕ್ಷ ಚೆಲುವರಾಜ್ ಮತ್ತಿತರರಿದ್ದರು.