ಕಡ್ಡಾಯ ಕನ್ನಡ ನಾಮಫಲಕ: ಕರವೇ ವತಿಯಿಂದ ಅಭಿಯಾನ

ವಿಜಯ ಸಂಘರ್ಷ
ಶಿವಮೊಗ್ಗ: ಕಡ್ಡಾಯವಾಗಿ ಎಲ್ಲಾ ಅಂಗಡಿ ಮುಂಗಟ್ಟುಗಳ ಮೇಲೆ ಅಳವಡಿಸಿರುವ ನಾಮಫಲಕ ಕನ್ನಡದಲ್ಲಿರಬೇಕು ಎಂದು ಆಗ್ರಹಿಸಿ ಶಿವಮೊಗ್ಗ ಜಿಲ್ಲಾ ಕರ್ನಾಟಕ ರಕ್ಷಣ ವೇದಿಕೆ ಘಟಕದ ವತಿಯಿಂದ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಶಿವಪ್ಪ ನಾಯಕ ವೃತ್ತದಿಂದ ಸಾಗಿದ ಪ್ರತಿಭಟನಾ ಮೆರವಣಿಗೆಯು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು, ಡಿ.27ರಂದು ಕನ್ನಡ ನಾಮಫಲಕ ಕಡ್ಡಾಯ ಹೋರಾಟದಲ್ಲಿ ನೂರಾರು ಕಾರ್ಯಕರ್ತರು ಜೈಲು ಸೇರಿದ್ದರು. ಈ ಹೋರಾಟದ ಫಲವಾಗಿ ರಾಜ್ಯ ಸರ್ಕಾರ ಭಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ ವಿಧೇಯಕ ಕಾನೂನಾಗಿ ಜಾರಿಯಾಗಿದೆ. ಈ ಕಾನೂನು ಪರಿಪೂರ್ಣವಾಗಿ ಜಾರಿಯಾಗು ವಂತೆ ನೋಡಿಕೊಳ್ಳುವ ಜವಾಬ್ದಾರಿ ಕನ್ನಡಿಗರ ಮೇಲಿದೆ.

ಇತರೆ ಭಾಷೆಯ ನಾಮಫಲಕಗಳು ಕನ್ನಡಕ್ಕೆ ಅಗೌರವವಾಗಿದ್ದು, ಕರ್ನಾಟಕದಲ್ಲಿ ಕನ್ನಡದಲ್ಲೇ ನಾಮಫಲಕ ಇರಬೇಕು ಎಂಬ ಅಭಿಯಾನವನ್ನು ರಕ್ಷಣ ವೇದಿಕೆ ರಾಜ್ಯಾದಾದ್ಯಂತ ವಿಸ್ತರಿಸುತ್ತಿದ್ದು, ಎಲ್ಲರಿಗೂ ಅರಿವು ಮೂಡಿಸುವ ಕೆಲಸ ಮಾಡಲಿದೆ ಎಂದರು.

ಈ ಹಿನ್ನಲೆಯಲ್ಲಿ ನಾಳೆಯಿಂದ ಎಲ್ಲಾ ಉದ್ಯಮಿಗಳು, ವ್ಯಾಪಾರಸ್ಥರು, ಶಿಕ್ಷಣ ಸಂಸ್ಥೆಗಳು, ಖಾಸಗಿ ಆಸ್ಪತ್ರೆಗಳು, ಕೈಗಾರಿಕೆ ಗಳು, ತಮ್ಮ ಸಂಸ್ಥೆಯ ನಾಮಫಲಕದಲ್ಲಿ ಶೇ.60 ರಷ್ಟು ಕನ್ನಡವಿರಬೇಕು, ಕನ್ನಡಕ್ಕೆ ಮೊದಲ ಸ್ಥಾನ ಇರಬೇಕು. ಇದನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು ಎಂಬುವುದು ರಕ್ಷಣಾ ವೇದಿಕೆಯ ಉದ್ದೇಶವಾಗಿದೆ. ಕಾನೂನು ಉಲ್ಲಂಘಿಸಿದ್ದಲ್ಲಿ ಮುಂಬರುವ ದಿನಗಳಲ್ಲಿ ವೇದಿಕೆವತಿಯಿಂದ ಉಗ್ರ ಹೋರಾಟ ಕೈಗೊಳ್ಳುವ ಎಚ್ಚರಿಸಿದರು.

ಜಿಲ್ಲಾ ಮಹಿಳಾ ಅಧ್ಯಕ್ಷರಾದ ಜ್ಯೋತಿ ಸೋಮಶೇಖರ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ವೇದಿಕೆಯ ಜಿಲ್ಲಾಧ್ಯಕ್ಷ ಹೆಚ್.ಮಂಜುನಾಥ್ ಪ್ರಮುಖರಾದ ಕೆ.ಎನ್ ಪ್ರಶಾಂತ್, ಜಾನವಿ, ಲೀಲಾವತಿ ವಿರುಪಾಕ್ಷ, ಗೀತಾ, ನಿರ್ಮಲ, ಸೌಮ್ಯ, ಮಂಜುಳಾ ಪೂಜಾ, ಮೇರಿ, ಶಾಂತ, ನಾಗರಾಜ್ ಶ್ರೀಧರ್ ಪ್ರತಾಪ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು