ಮಾಜಿ ಸಿಎಂ ಪುತ್ರಿ ಗೀತಾ ರವರಿಗೆ ಸಮಾಜ ಸೇವೆ ರಕ್ತಗತವಾಗಿ ಬಂದಿದೆ

ವಿಜಯ ಸಂಘರ್ಷ 
ಭದ್ರಾವತಿ: ಜನರಿಗೆ ಒಳ್ಳೆಯದನ್ನು ಮಾಡಬೇಂಬ ಮನೋಭಾವ ಗೀತಾ ಶಿವರಾಜ್ ಕುಮಾರ್ ರವರ ರಕ್ತದಲ್ಲಿಯೇ ಹರಿದುಬಂದಿದೆ. ಜೊತೆಗೆ ಸೇವೆ ಮಾಡಲು ತಾಕತ್ತಿದೆ. ಆದ್ದರಿಂದ ಅವರನ್ನು ಬೆಂಬಲಿಸಿ ಎಂದು ಚಲನಚಿತ್ರ ನಟ ಶಿವರಾಜ್ ಕುಮಾರ್ ನುಡಿದರು.

ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಸಹೋದರ ಬಿ.ಕೆ ಶಿವಕುಮಾರ್‌ರವರ ಗಾಂಧಿನಗರದ ನಿವಾಸದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಲೋಕಸಭಾ ಚುನಾವಣಾ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಮಾತನಾಡಿ, ರಾಜಕೀಯ ನನ್ನ ಬಹುದಿನದ ಕನಸು. ಆದರೆ ಇದೀಗ ಕಾಲಕೂಡಿಬಂದಿದೆ. ಮುಂದಿನ ನನ್ನ ಜೀವನವನ್ನು ಜನಸೇವೆಗೆ ಮೀಸಲಿಡುವೆ. ನನ್ನದು ಕೇವಲ ಭರವಸೆಯಲ್ಲ ಅನುಷ್ಠಾನ ಎಂದು ಹೇಳಿದರು.

ತಮ್ಮ ತಂದೆ ಬಂಗಾರಪ್ಪ ನೀಡಿದ ಯೋಜನೆಗಳು ಮೂರು ದಶಕ ಕಳೆದರು ಜನಮಾನಸದಲ್ಲಿ ಉಳಿದಿವೆ. ಇದು ಬಂಗಾರಪ್ಪನವರ ಜನಪರ ಆಡಳಿತಕ್ಕೆ ಸಾಕ್ಷಿ. ನಾನು ಶಿವಮೊಗ್ಗ ಜಿಲ್ಲೆಯವಳಾಗಿ ಜಿಲ್ಲೆಯ ಜನತೆಗೆ ಮತ ಕೇಳದೆ, ಇನ್ಯಾರಿಗೆ ಮತಕೇಳಲಿ. ಭದ್ರಾವತಿಯಲ್ಲಿ ದೊರೆತ ಸ್ವಾಗತ ನನ್ನಲ್ಲಿ ಭರವಸೆಯನ್ನು ಹೆಚ್ಚಿಸಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರ ನೀಡಿದ ಭರವಸೆಯನ್ನು ಕೆಲ ತಿಂಗಳಲ್ಲಿ ಈಡೇರಿಸಿರುವುದೇ ಜನಪರ ಆಡಳಿತಕ್ಕೆ ಸಾಕ್ಷಿ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮಾತನಾಡಿ,ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಗೆಲುವಿಗೆ ಪಕ್ಷದ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಶ್ರಮವಹಿಸುವಂತೆ ಕೋರಿದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರವರ ನೇತೃತ್ವದಲ್ಲಿ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಪರ ಮತದಾರರ ಒಲವು ಕಂಡು ಬರುತ್ತಿದೆ. ಪಕ್ಷದ ಮುಖಂಡರು, ಕಾರ್ಯಕರ್ತರು ಮನೆಮನೆಗೆ ತೆರಳಿ ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ಮನವರಿಕೆ ಮಾಡಿಕೊಡುವ ಮೂಲಕ ಮತ ಯಾಚಿಸುವಂತೆ ಮನವಿ ಮಾಡಿದರು.

ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಮಾತನಾಡಿ, ಜೆಡಿಎಸ್ ಪಕ್ಷ ಬಸ್ ನಿಲ್ದಾಣ ದಲ್ಲಿ ಕಳೆದುಹೋದ ಮಗುವಿದ್ದಂತೆ.ಯಾರು ಕೈಹಿಡಿಯುತ್ತಾರೋ ಅವರ ಹಿಂದೆ ಹೋಗುತ್ತಿರುತ್ತದೆ. ಭದ್ರಾವತಿಯನ್ನು ನಿರುದ್ಯೋಗಿಗಳ ನಗರವನ್ನಾಗಿಸಿದ್ದು ಬಿಜೆಪಿ ಸರ್ಕಾರವೇ ನೇರ ಕಾರಣ. ಬಿಜೆಪಿ ಕಾರ್ಮಿಕರ ಪರವಾಗಿಲ್ಲ. ಜನರಿಗೆ ಇದು ಅರ್ಥವಾಗುತ್ತಿಲ್ಲ. ಕೆ.ಎಸ್.ಈಶ್ವರಪ್ಪ ಹುಟ್ಟು ಧೈರ್ಯವಂತನಲ್ಲ. ಅವರ ಧೈರ್ಯ ಅವರ ಮನೆ ಕಾಂಪೌಡ್ ವರೆಗೆ ಮಾತ್ರ. ಚಾಕು ಖಡ್ಗದ ಬಗ್ಗೆ ಮಾತನಾಡುತ್ತಾರೆ. ಆದರೆ ಬ್ಲೇಡ್ ತಂದರೂ ಹೆದರಿ ಅಡುಗೆ ಕೋಣೆ ಸೇರಿಕೊಳ್ಳುವ ಪುಕ್ಕಲುತನ ಅವರದ್ದು ಎಂದು ಟೀಕಿಸಿದರು.
ಶಾಸಕ ಬಿ.ಕೆ ಸಂಗಮೇಶ್ವರ್ ನೇತೃತ್ವ ವಹಿಸಿದ್ದರು. ನಗರಸಭೆ ಅಧ್ಯಕ್ಷೆ ಲತಾ ಚಂದ್ರಶೇಖರ್, ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್, ಸದಸ್ಯ ಚೆನ್ಬಪ್ಪ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಲ್ಕೀಷ್ ಬಾನು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸುಂದರೇಶ್, ಮುಖಂಡರಾದ ಬಿ.ಕೆ.ಮೋಹನ್, ಶ್ರೀಕಾಂತ್, ಸಿ.ಎಂ.ಸಾದಿಕ್, ನಗರ ಘಟಕದ ಅಧ್ಯಕ್ಷ ಎಸ್.ಕುಮಾರ್, ಗ್ರಾಮಾಂತರ ಅಧ್ಯಕ್ಷ ಎಚ್.ಎಲ್.ಷಡಾಕ್ಷರಿ, ಸೇರಿದಂತೆ ಅನೇಕ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು