ವಿಜಯ ಸಂಘರ್ಷ
ಶಿವಮೊಗ್ಗ: ಮಕ್ಕಳಲ್ಲಿರುವ ಸುಪ್ತ ಪ್ರತಿಭೆ ಮತ್ತು ಕ್ರೀಯಾಶೀಲತೆ ವೃದ್ಧಿಸಲು, ಕೌಶಲ್ಯಗಳನ್ನುಅನಾವರಣ ಗೊಳಿಸಲು ಬೇಸಿಗೆ ಶಿಬಿರಗಳು ಅತ್ಯಂತ ಸಹಕಾರಿಯಾಗಿವೆ ಎಂದು ಜಿಲ್ಲಾ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಕಾರ್ಯದರ್ಶಿ ಪರಮೇಶ್ವರ್ ಅಭಿಪ್ರಾಯಪಟ್ಟರು.
ನಗರದ ಬಿಎಚ್ ರಸ್ತೆಯಲ್ಲಿರುವ ಸ್ಕೌಟ್ ಭವನದಲ್ಲಿ ಆಯೋಜಿಸಿರುವ ಏಳು ದಿನಗಳ ಬೇಸಿಗೆ ತರಬೇತಿ ಶಿಬಿರದ ಸಮಾರೋಪದಲ್ಲಿ ಮಾತನಾಡಿ, ಬೇಸಿಗೆ ರಜೆ ದಿನಗಳಲ್ಲಿ ಮಕ್ಕಳನ್ನು ನಿಯಂತ್ರಣ ಮಾಡುವುದೇ ಕಷ್ಟ ಎನ್ನುವ ಪರಿಸ್ಥಿತಿ ಪಾಲಕರಲ್ಲಿದೆ. ಇಂತಹ ಸಂದರ್ಭಗಳಲ್ಲಿ ಮಕ್ಕಳ ಬೌದ್ಧಿಕ ಹಾಗೂ ಕ್ರೀಯಾಶೀಲ ಬೆಳವಣಿಗೆಗೆ ಬೇಸಿಗೆ ಶಿಬಿರಗಳು ಸಹಕಾರಿ ಆಗುತ್ತವೆ ಎಂದರು.
ಸಾಂಸ್ಕೃತಿಕ ಶಿಬಿರ, ಯೋಗ, ಕ್ರೀಡೆ ಕಲಿಕೆಯಂತಹ ಅಭ್ಯಾಸಗಳಲ್ಲಿ ಮಕ್ಕಳನ್ನು ತೊಡಗಿಸಬೇಕು. ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಶಿಬಿರಗಳಲ್ಲಿ ಮಕ್ಕಳಿಗೆ ಪ್ರಥಮ ಚಿಕಿತ್ಸೆ, ರಸ್ತೆ ಸುರಕ್ಷತೆ, ಗ್ರಾಮೀಣ ಕ್ರೀಡೆ, ಜನಪದ ನೃತ್ಯ ಸೇರಿದಂತೆ ವಿಶೇಷ ವಿಷಯ ಗಳನ್ನು ಕಲಿಸಲಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಸ್ಥಳೀಯ ಸಂಸ್ಥೆ ಕಾರ್ಯದರ್ಶಿ, ಬೇಸಿಗೆ ಶಿಬಿರದ ರೂವಾರಿ ರಾಜೇಶ್ ಅವಲಕ್ಕಿ ಮಾತನಾಡಿ, ರಾಜ್ಯ ಶಾಖೆ ಆದೇಶದ ಮೇರೆಗೆ ಬೇಸಿಗೆ ಶಿಬಿರಗಳನ್ನು ಆಯೋಜಿಸಿದ್ದು, ಮಕ್ಕಳಿಗೆ ಶಿಸ್ತುಬದ್ಧ ಜೀವನಶೈಲಿ ಹಾಗೂ ಪರಿಣಾಮಕಾರಿ ಅಂಶಗಳನ್ನು ಕಲಿಸಲಾಗಿದೆ ಎಂದು ಹೇಳಿದರು.
ಕೇಂದ್ರ ಸ್ಥಾನಿಕ ಆಯುಕ್ತ ಜಿ.ವಿಜಯ ಕುಮಾರ್ ಮಾತನಾಡಿ, ಬೇಸಿಗೆ ಶಿಬಿರಗಳು ಮಕ್ಕಳಿಗೆ ಕೌಶಲ್ಯಗಳು ಹಾಗೂ ತುರ್ತು ಸಂದರ್ಭಗಳಲ್ಲಿ ನಿಭಾಯಿಸುವ ಬಗ್ಗೆ ಆತ್ಮವಿಶ್ವಾಸವನ್ನು ಕಲಿಸುತ್ತವೆ. ಧ್ಯಾನ, ಯೋಗ, ಭಜನೆಯಲ್ಲಿ ತೊಡಗಿಸಿಕೊಳ್ಳುವು ದರಿಂದ ಪರಿಪೂರ್ಣ ಕಲಿಕೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಶಿಬಿರ ಸಂಪನ್ಮೂಲ ವ್ಯಕ್ತಿಗಳಾದ ಶಿಕ್ಷಕರಾದ ಮೀನಾಕ್ಷಮ್ಮ, ಶಾಂತಮ್ಮ, ಸುನಂದಮ್ಮ, ಹೇಮಲತಾ, ದೀಪು, ಸ್ಕೌಟ್ ಆಯುಕ್ತ ಕೆ.ಪಿ.ಬಿಂದುಕುಮಾರ್ ಉಪಸ್ಥಿತರಿದ್ದರು. ಏಳು ದಿನಗಳ ಕಾಲ ಶಿಬಿರ ಅತ್ಯಂತ ಯಶಸ್ವಿಯಾಗಿ ಜರುಗಿತು.