ತಾಯಿ ಆರೋಗ್ಯದ ಬಗ್ಗೆ ಮುತುವರ್ಜಿ ವಹಿಸಿ: ಡಾ.ಕೌಸ್ತುಭ ಅರುಣ್

ವಿಜಯ ಸಂಘರ್ಷ 
ಶಿವಮೊಗ್ಗ: ಅರೋಗ್ಯ ಸೂಚ್ಯಂಕ ಗಳಲ್ಲಿ ತಾಯಿಯ ಮರಣ, ಶಿಶುವಿನ ಮರಣ ಪ್ರಮಾಣ ಪ್ರಮುಖವಾದವು. ರಾಷ್ಟ್ರೀಯ ಆರೋಗ್ಯ ಅಭಿಯನದ ಫಲವಾಗಿ ಹಿಂದೆ ಜಾಸ್ತಿ ಇದ್ದಸೂಚ್ಯಂಕ ಗಳು ನಿಯಂತ್ರಣಕ್ಕೆ ಬಂದಿವೆ ಎಂದು ವೈದ್ಯೆ ಡಾ.ಕೌಸ್ತುಭ ಅರುಣ್ ಹೇಳಿದರು.

ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ರಾಜೇಂದ್ರನಗರದ ರೋಟರಿ ಸಭಾಂಗಣದಲ್ಲಿ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮ ದಲ್ಲಿ ತಾಯಿ ಮತ್ತು ಮಕ್ಕಳ ಆರೋಗ್ಯ ರಕ್ಷಣೆ ವಿಷಯ ಕುರಿತು ಮಾತನಾಡಿದರು.

ತಾಯಿಯ ಮಾನಸಿಕ ಆರೋಗ್ಯದ ಬಗ್ಗೆ ಮುತುವರ್ಜಿ ವಹಿಸಬೇಕು. ಮಕ್ಕಳಿಗೆ ತಾಯಿಯ ಹಾಲು ಅತಿ ಅವಶ್ಯಕ. ಕಾಲ ಕಾಲಕ್ಕೆ ಲಸಿಕೆಗಳೂ ಜಂತು ಹುಳು ನಿವಾರಣಾ ಮಾತ್ರೆಗಳ ಸೇವನೆ ಅತಿ ಅವಶ್ಯಕ. ಹೆಣ್ಣು ಮಕ್ಕಳಿಗೆ ಗರ್ಭಕೋಶದ ಕೊರಳಿನ ಗಡ್ಡೆಯ ವಿರುದ್ಧ ಎಚ್‌ಪಿವಿ ಲಸಿಕೆ ಕೊಡಿಸಬಹುದು ಎಂದು ತಿಳಿಸಿದರು.
ತಾಯಿ ಮಗು ಸುರಕ್ಷಿತವಾಗಿದ್ದರೆ ದೇಶ ಸದೃಢವಾಗಿರುತ್ತದೆ. ಆರೋಗ್ಯದ ಬಗ್ಗೆ ಎಲ್ಲರೂ ಕಾಳಜಿ ವಹಿಸಬೇಕು. ಸಕಾಲದಲ್ಲಿ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಉಪಯೋಗಿಸಿ ಕೊಳ್ಳಬೇಕು. ವೈದ್ಯರ ಸಲಹೆ ಮೇರೆಗೆ ಔಷಧೋಪಚಾರ ಮಾಡುವುದರ ಜೊತೆಗೆ ಪ್ರತಿದಿನ ಯೋಗ ಪ್ರಾಣಾಯಾಮ ಧ್ಯಾನ ಹಾಗೂ ಉತ್ತಮ ಆರೋಗ್ಯ ಸೇವನೆ ಮತ್ತು ಒತ್ತಡದಿಂದ ದೂರವಿರಬೇಕು ಎಂದರು.

ಆರೋಗ್ಯ ಸಂಪತ್ತಿನ ಮುಂದೆ ಬೇರೆ ಸಂಪತ್ತು ಮತ್ತೊಂದಿಲ್ಲ. 40 ವರ್ಷದ ನಂತರ ಪ್ರತಿಯೊಬ್ಬರೂ ತಮ್ಮ ಆರೋಗ್ಯವನ್ನು ಆಗಾಗ ವೈದ್ಯರ ಮುಖಾಂತರ ಪರೀಕ್ಷಿಸಿ ಕೊಳ್ಳಬೇಕು. ಉತ್ತಮ ಜೀವನ ಕೌಶಲದ ಜೊತೆಗೆ ಸಕಾರಾತ್ಮಕ ಮನೋಭಾವನೆಯನ್ನು ಹೊಂದಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಶಿವಮೊಗ್ಗ ಪೂರ್ವದ ಅಧ್ಯಕ್ಷ ಸತೀಶ್ ಚಂದ್ರ ಮಾತನಾಡಿ, ಇಂದು ಆಹಾರ ಪದ್ಧತಿ ಜೀವನ ಶೈಲಿಯಿಂದ ಹಾಗೂ ದೈಹಿಕ ವ್ಯಾಯಾಮ ಇಲ್ಲದೆ ಇರುವುದರಿಂದ ಆರೋಗ್ಯ ಬೇಗ ಹದಗೆಡುತ್ತಿದೆ. ಎಲ್ಲರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಹೇಳಿದರು.
ಸಮಾರಂಭದಲ್ಲಿ ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯ ಕುಮಾರ್, ಚಂದ್ರಹಾಸ ರಾಯ್ಕರ್, ಚಂದ್ರಶೇಖರಯ್ಯ, ಮುಕುಂದೇಗೌಡರು, ಕೃಷ್ಣಮೂರ್ತಿ, ಡಾ. ಅರುಣ್, ಡಾ. ಧನಂಜಯ, ಅಲೆಮನೆ ಮಹೇಶ್, ಕೇಶವಪ್ಪ, ಬಿಂದು ವಿಜಯ ಕುಮಾರ್, ಮಧುರ ಮಹೇಶ್, ಅರುಣ್ ದೀಕ್ಷಿತ್, ಸಂತೋಷ್, ಅವಿನಾಶ್, ಶಶಿಕಾಂತ್ ನಾಡಿಗ್, ಗಣೇಶ್, ಶ್ವೇತಾ ಆಶಿತ್, ಗೀತಾ ಚಿಕ್ಕಮಠ, ಸೂರ್ಯ ನಾರಾಯಣ ರಾವ್, ನಾಗವೇಣಿ. ಎಸ್.ಆರ್., ಸಪ್ನಾ ಬದ್ರಿನಾಥ್ ಹಾಗೂ ರೋಟರಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು