ವಿಜಯ ಸಂಘರ್ಷ
ಭದ್ರಾವತಿ: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ವೈಯಕ್ತಿಕ ಟೀಕೆಗಳನ್ನು ಮಾಡುವ ಮೂಲಕ ಕಾಲಹರಣ ಮಾಡಲಾಗುತ್ತಿದ್ದು, ಇವುಗಳಿಗೆ ಈಗ ಉತ್ತರ ಕೊಡುವ ಸಮಯವಲ್ಲ. ನರೇಂದ್ರ ಮೋದಿ ಯವರು ಪುನಃ ಪ್ರಧಾನಿಯಾಗುವುದು ಖಚಿತವಾಗಿದ್ದು, ವಿಜಯೋತ್ಸವ ಆಚರಣೆ ಮೂಲಕ ಉತ್ತರ ನೀಡಲಾಗುವುದು ಎಂದು ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ ಹೇಳಿದರು.
ಅವರು ಹಳೇನಗರದ ಕನಕಮಂಟಪ ಮೈದಾನದಲ್ಲಿ ಆಯೋಜಿಸಲಾಗಿದ್ದ ಭಾರತೀಯ ಜನತಾ ಪಕ್ಷದ ಬೂತ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಶಿವಮೊಗ್ಗ ಜಿಲ್ಲೆ ರಾಷ್ಟ್ರ ಮತ್ತು ರಾಜ್ಯದ ರಾಜಕಾರಣದಲ್ಲಿ ತನ್ನದೇ ಆದ ಕೊಡುಗೆ ಗಳನ್ನು ನೀಡಿದೆ. ಇಲ್ಲಿನ ರಾಜಕೀಯ ಮುತ್ಸದ್ದಿಗಳು ಮುಖ್ಯಮಂತ್ರಿ ಮತ್ತು ಸಂಸದರಾಗಿ ಆಯ್ಕೆಯಾಗಿ ಸೇವೆ ಸಲ್ಲಿಸಿದ್ದಾರೆ. ಇಂತಹ ನೆಲದಲ್ಲಿ ಇದೀಗ ವೈಯಕ್ತಿಕ ಟೀಕೆಗಳನ್ನು ಮಾಡುವ ಮೂಲಕ ಮತದಾರರ ದಿಕ್ಕು ತಪ್ಪಿಸುವ ಕೆಲಸ ನಡೆಯುತ್ತಿದೆ. ಇವುಗಳಿಗೆ ಈಗ ಉತ್ತರ ಕೊಡುವ ಅಗತ್ಯವಿಲ್ಲ. ನರೇಂದ್ರ ಮೋದಿ ಯವರು ಪುನಃ ಪ್ರಧಾನಿಯಾಗುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಭದ್ರಾವತಿ ವಿಧಾನಸಭಾ ಕ್ಷೇತ್ರದ ಮತದಾರರಿಗೆ ಸದಾ ಕಾಲ ಕೃತಜ್ಞರಾಗಿದ್ದು, ಚುನಾವಣೆ ಫಲಿತಾಂಶ ಪ್ರಕಟಗೊಂಡು ಗೆಲುವಿನ ವಿಜಯೋತ್ಸವ ಇದೆ ಸ್ಥಳದಲ್ಲಿ ಆಚರಿಸುವ ಮೂಲಕ ಸಂಭ್ರಮದ ಸಿಹಿ ಹಂಚಲಾಗುವುದು ಎಂದರು.
ಶಿವಮೊಗ್ಗ ನಗರ ಶಾಸಕ ಚನ್ನಬಸಪ್ಪ ಮಾತನಾಡಿ, ನಾವೆಲ್ಲರೂ ಹಿಂದುತ್ವದ ಪರವಾಗಿ ಹೋರಾಟ ನಡೆಸಿಕೊಂಡು ಬಂದವರು. ಬೇರೆಯವರು ನಮಗೆ ಹಿಂದುತ್ವದ ಬಗ್ಗೆ ಪಾಠ ಹೇಳಿಕೊಡುವುದು ಬೇಡ. ಈ ಚುನಾವಣೆಯಲ್ಲಿ ರಾಘವೇಂದ್ರ ರವರನ್ನು ಪುನಃ ಗೆಲುಸುವ ಜೊತೆಗೆ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಎಲ್ಲರೂ ಸಹ ಒಗ್ಗಟ್ಟಾಗಿ ಶ್ರಮಿಸಬೇಕಾಗಿದೆ ಎಂದರು.
ವೇದಿಕೆಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಪ್ರಮುಖರಾದ ಎಸ್.ಎಸ್ ಜ್ಯೋತಿಪ್ರಕಾಶ್, ಪುಣ್ಯಪಾಲ್, ಕೂಡ್ಲಿಗೆರೆ ಹಾಲೇಶ್, ಎಚ್. ತೀರ್ಥಯ್ಯ, ಮಂಗೋಟೆ ರುದ್ರೇಶ್, ಜಿ. ಆನಂದಕುಮಾರ್, ವಿ. ಕದಿರೇಶ್, ಕೆ. ಮಂಜುನಾಥ್, ಚನ್ನೇಶ್, ಅಣ್ಣಪ್ಪ, ಜೆಡಿಎಸ್ ಪ್ರಮುಖರಾದ ಆರ್. ಕರುಣಾಮೂರ್ತಿ, ಧರ್ಮ ಕುಮಾರ್, ಗೀತಾ ಪವಾರ್, ರವಿಕುಮಾರ್‌ಮತ್ತು ಬಿಜೆಪಿ ಹಾಗು ಜೆಡಿಎಸ್ ಪಕ್ಷಗಳ ಮುಖಂಡರು, ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Tags:
ಭದ್ರಾವತಿ ಬಿಜೆಪಿ ಸುದ್ದಿ