ವಿಜಯ ಸಂಘರ್ಷ
ಶಿವಮೊಗ್ಗ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದ 8,62,789 ಪುರುಷರು, 8,90,061 ಮಹಿಳೆಯರು ಹಾಗೂ ಮೂವರು ತೃತೀಯ ಲಿಂಗಿಗಳೂ ಸೇರಿದಂತೆ ಒಟ್ಟು 17,52,885 ಮಂದಿ ಮತದಾನ ಮಾಡುವ ಅವಕಾಶ ಹೊಂದಿದ್ದಾರೆ ಎಂದು ಜಿಲ್ಲಾ ಚುನಾವಣಾಧಿ ಕಾರಿ ಗುರುದತ್ತ ಹೆಗಡೆ ತಿಳಿಸಿದರು.
ಚುನಾವಣಾ ಸಿದ್ಧತೆ ಕುರಿತು ಅಧಿಕಾರಿ ಗಳೊಂದಿಗೆ ಸಭೆ ನಡೆಸಿದ ಅವರು, ಅಂಚೆ ಮತದಾನದ ಕಡೆ ಹೆಚ್ಚಿನ ಗಮನ ಹರಿಸಬೇಕು. ಮತದಾನಕ್ಕೆ ಇವಿಎಂ ಸಿದ್ಧಪಡಿಸುವಿಕೆಗೆ ಹೆಚ್ಚಿನ ಪ್ರಾಮುಖ್ಯ ನೀಡಬೇಕು. ಈ ಬಾರಿ ಚುನಾವಣೆಯಲ್ಲಿ ಎರಡು ಬ್ಯಾಲೆಟ್ ಇರುವ ಕಾರಣ ಜಾಗರೂಕವಾಗಿ ಗಮನಿಸಬೇಕು. ನಿಯೋಜಿತ ಸಿಬ್ಬಂದಿಗೆ ಎರಡನೇ ತರಬೇತಿ ಯನ್ನು ಪರಿಣಾಮಕಾರಿಯಾಗಿ ನಡೆಸಬೇಕೆಂದರು.
ಎಲ್ಲ ಸಹಾಯಕ ಚುನಾವಣಾಧಿಕಾರಿಗಳು ಇವಿಎಂ ಸಿದ್ಧತೆ, ತರಬೇತಿ ಮತ್ತು ಮತದಾನದಂದು ಕನಿಷ್ಠ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಕಾಳಜಿ ವಹಿಸಬೇಕು. ಮತಗಟ್ಟೆಗಳಲ್ಲಿ ರ‌್ಯಾಂಪ್, ಕುಡಿಯುವ ನೀರು, ಪೀಠೋಪಕರಣಗಳ ವ್ಯವಸ್ಥೆ, ಸರದಿ ನಿರ್ವಹಣೆ ಬಗ್ಗೆ ಸಮರ್ಪಕ ಯೋಜನೆ ರೂಪಿಸಬೇಕು ಎಂದು ಸೂಚಿಸಿದರು.
ಎಲ್ಲ ತಾಲೂಕುಗಳಲ್ಲಿ ಚುನಾವಣಾ ನಿಯೋಜಿತ ಅಧಿಕಾರಿಗಳಿಂದ ನಮೂನೆ- 12 ಅಂಚೆ ಮತಪತ್ರ ಪಡೆಯಲಾಗುತ್ತಿದ್ದು, ಬಾಕಿ ಇರುವ ಮತಪತ್ರಗಳನ್ನು ಇನ್ನೂ ಮೂರ‌್ನಾಲ್ಕು ದಿನಗಳಲ್ಲಿ ನೀಡಿ 12ಎ ಇಡಿಸಿ ಪಡೆದು ಕೊಳ್ಳುವಂತೆ ಸಹಾಯಕ ಚುನಾವಣಾಧಿ ಕಾರಿಗೆ ಸೂಚನೆ ನೀಡಿದರು.