ವಿಜಯ ಸಂಘರ್ಷ
ಶಿವಮೊಗ್ಗ: ಇಡೀ ವಿಶ್ವವನ್ನೆ ಒಂದುಗೂಡಿ ಸುವ ಶಕ್ತಿ ಸಂಸ್ಕೃತ ಭಾಷೆಗಿದೆ. ದೆಹಲಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾನಿಲಯ ವತಿಯಿಂದ ಹಲವಾರು ಯೋಜನೆ ಗಳನ್ನು ವಿದ್ಯಾರ್ಥಿಗಳು ಹಾಗೂ ಸಂಸ್ಕೃತ ಕಲಿಕೆ ಆಸಕ್ತರಿಗೆ ನೀಡುತ್ತಿರುವುದು ಶ್ಲಾಘನೀಯ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯ ಕುಮಾರ್ ಹೇಳಿದರು.
ಕೇಂದ್ರೀಯ ಸಂಸ್ಕೃತ ವಿಶ್ವ ವಿದ್ಯಾಲಯ ದೆಹಲಿ, ಸಂಸ್ಕೃತ ಭಾರತಿ ಶಿವಮೊಗ್ಗ, ಯೂತ್ ಹಾಸ್ಟೆಲ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ತರುಣೋದಯ ಘಟಕ, ಗೀರ್ವಾಣ ಭಾರತಿ ಶ್ರೀ ಆದಿಚುಂಚನಗಿರಿ ಘಟಕ ಹಾಗೂ ತರುಣೋದಯ ಸಂಸ್ಕೃತ ಸೇವಾ ಸಂಸ್ಥೆ ಆಶ್ರಯದಲ್ಲಿ ಹಿಮಾಲಯದ ಚಂದ್ರಕಾಣಿ ಪಾಸ್ ನಲ್ಲಿ ಸಂಸ್ಕೃತ ಧ್ವಜಾರೋಹಣ ಮಾಡಲು ಚಾರಣಕ್ಕೆ ಹೊರಟಿರುವ ಸಾಹಸಿಗರಿಗೆ ಮಥುರಾ ಪಾರಾಡೈಸ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಬಿಳ್ಕೋಡುಗೆ ಸಮಾರಂಭದಲ್ಲಿ ಮಾತನಾಡಿದರು.
ಸಂಸ್ಕೃತ ಭಾಷೆಯಲ್ಲಿ ಸಂಸ್ಕಾರ, ಜ್ಞಾನ, ಸಂಸ್ಕೃತಿ ಹಾಗೂ ವಿಜ್ಞಾನ ಅಡಕವಾಗಿದೆ. ಭಾರತ ದೇಶದ ಪವಿತ್ರ ಗ್ರಂಥಗಳು ಸಂಸ್ಕೃತ ಭಾಷೆಯಲ್ಲಿ ರಚಿತವಾಗಿದೆ. ದೇಶದ ಎಲ್ಲ ಭಾಷಿಗರಿಗೂ ತಲುಪುವಂತಾಗಿದೆ. ಇಂತಹ ಭಾಷೆಯ ಪುನರುತ್ಥಾನಕ್ಕೆ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾ ನಿಲಯದವರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಸುಲಭವಾಗಿ ಸಂಸ್ಕೃತ ಕಲಿಸುವ ಹತ್ತಾರು ಯೋಜನೆಯನ್ನು ರೂಪಿಸಿದ್ದಾರೆ. ವಿವಿ ವೈಸ್ ಚಾನ್ಸಲರ್ ಶ್ರೀನಿವಾಸ ವರಖೇಡಿ ಮೂಲತಃ ಕರ್ನಾಟಕ ದವರಾಗಿದ್ದು, ಹೊಸ ಹೊಸ ಯೋಜನೆ ರೂಪಿಸಿ ಸಂಸ್ಕೃತ ಭಾಷಾ ಪ್ರಚಾರಕ್ಕೆ ಹೆಚ್ಚು ಮಹತ್ವ ನೀಡುತ್ತಿದ್ದಾರೆ ಎಂದು ತಿಳಿಸಿದರು.
ಚಾರಣಿಗರ ತಂಡವು 2024ರ ಮೇ 26ರಂದು ಹಿಮಾಚಲ ಪ್ರದೇಶದ ಕುಲು ಕಣಿವೆಯ ಚಂದ್ರಕಾಣಿ ಪಾಸ್ 12500 ಅಡಿ ಎತ್ತರ ಪ್ರದೇಶದಲ್ಲಿ ಧ್ವಜಾ ರೋಹಣ ಮಾಡಲಿದೆ. ದೇಶದ 13 ರಾಜ್ಯಗಳಿಂದ ಕೇಂದ್ರೀಯ ವಿಶ್ವ ವಿದ್ಯಾನಿಲಯದ 26 ಜನ ವಿದ್ಯಾರ್ಥಿ ಗಳ ಜತೆಗೆ ಕರ್ನಾಟಕದ 28 ಜನರ ತಂಡ ಐತಿಹಾಸಿಕ ಕಾರ್ಯಕ್ರಮಕ್ಕೆ ತೆರಳಿದೆ. ಶಿವಮೊಗ್ಗ ನಗರದ ಸಾಹಸಿ ಅ.ನಾ.ವಿಜಯೇಂದ್ರರಾವ್ ತಂಡದ ನಾಯಕರಾಗಿ ಆಯ್ಕೆಯಾಗಿ ಹೋಗುತ್ತಿರುವುದು ರಾಜ್ಯ ಹಾಗೂ ಶಿವಮೊಗ್ಗ ನಗರಕ್ಕೆ ಹೆಮ್ಮೆಯ ಸಂಗತಿ.
ಸಮಾರಂಭದಲ್ಲಿ ವೈ.ಹೆಚ್.ಎ.ಐ. ತರುಣೋದಯ ಘಟಕದ ಕಾರ್ಯಾಧ್ಯಕ್ಷ ಎಸ್.ಎಸ್.ವಾಗೀಶ್ ಅಧ್ಯಕ್ಷತೆ ವಹಿಸಿದ್ದರು. ಅ.ನಾ.ವಿಜಯೇಂದ್ರರಾವ್, ಆದಿತ್ಯ ಪ್ರಸಾದ್ ಇದ್ದರು.