ವಿಜಯ ಸಂಘರ್ಷ
ಸಾಗರ: ಭೂ ಸೇನೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ತವರಿಗೆ ಆಗಮಿಸಿದ ಯೋಧನಿಗೆ ತವರೂರಲ್ಲಿ ಅದ್ದೂರಿ ಸ್ವಾಗತ ದೊರಕಿತು. ಸುಬೇದಾರ್ ಮಧು ಕುಮಾರ್ ವೀರಯೋಧ ಸುದೀರ್ಘ 28 ವರ್ಷಗಳ ಕಾಲ ಭಾರತಾಂಬೆಯ ಸೇವೆ ಸಲ್ಲಿಸಿ ತವರಿಗೆ ಆಗಮಿಸಿದ್ದಾರೆ.
ಸಾಗರ ತಾಲೂಕಿನ ಆನಂದಪುರದ ರೈಲ್ವೆ ನಿಲ್ದಾಣದಲ್ಲಿ ಯೋಧನಿಗೆ ಗ್ರಾಮಸ್ಥರು ಹಾಗೂ ಅಭಿಮಾನಿಗಳು ಹೂವಿನ ಹಾರ ಹಾಕಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು.
ಮಧುಕುಮಾರ್ ಮೂಲತಃ ಕಡಬಾ ಇಚ್ಲಾಂಪಾಡಿ ಗ್ರಾಮದವರಾಗಿದ್ದು 1996 ರಲ್ಲಿ ಭೂ ಸೇನೆಗೆ ಸೇರಿದರು. ಪ್ರಸ್ತುತ ಆನಂದಪುರದ ಕೆಪಿಎಸ್ ಶಾಲೆಯಲ್ಲಿ ಹಿಂದಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಸುಷ್ಮಾ ರವರು ಸುಬೇದಾರ್ ಮಧುಕುಮಾರ್ ರವರ ಧರ್ಮಪತ್ನಿ.
ಭಾರತಾಂಬೆಯ ಸೇವೆ ಸಲ್ಲಿಸಿ ಆಗಮಿಸಿದ ನನಗೆ ಈ ಅದ್ದೂರಿ ಸ್ವಾಗತ ನಿಜಕ್ಕೂ ರೋಮಾಂಚನ ಉಂಟು ಮಾಡಿತು. ಭಾರತಾಂಬೆಯ ಸೇವೆ ಸಲ್ಲಿಸಿದ ನಾನೇ ಪುಣ್ಯವಂತ ಇನ್ನೊಂದು ಜನ್ಮವಿದ್ದರೆ ಮತ್ತೆ ಯೋಧನಾಗಿ ಸೇವೆ ಸಲ್ಲಿಸಬೇಕೆಂಬ ಆಸೆ ಇದೆ ಎಂದರು.
ಯುವಕರು ಸೇನೆಯತ್ತ ಮುಖ ಮಾಡಿ ಭಾರತಾಂಬೆಯ ಸೇವೆ ಸಲ್ಲಿಸಿ ಇದರಂತಹ ಪುಣ್ಯದ ಕೆಲಸ ಮತ್ತೊಂದಿಲ್ಲ ಎಂದು ಯುವಕರಿಗೆ ಕರೆ ನೀಡಿದರು.
ಸಂಭ್ರಮಾಚರಣೆಯಲ್ಲಿ ಎಡೆಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಗ್ರಾಮಸ್ಥರು, ಕೆಪಿಎಸ್ ಶಾಲೆಯ ಶಿಕ್ಷಕರು ಸೇರಿದಂತೆ ಸ್ಥಳೀಯರಿದ್ದರು.
Tags:
ಸಾಗರ ಯೋಧನಿಗೆ ಸನ್ಮಾನ