ಅಂತರಗಂಗೆ ಗ್ರಾ ಪಂ ಅ‍ಧ್ಯಕ್ಷನ ಬಳಿ ಕೋಟಿ ರೂ.ಮೀರಿದ ಅಕ್ರಮ ಸಂಪಾದನೆ

ವಿಜಯ ಸಂಘರ್ಷ 
ಭದ್ರಾವತಿ: ಆದಾಯಕ್ಕಿಂತಲು ಹೆಚ್ಚು ಆಸ್ತಿ ಸಂಪಾದನೆ ಮಾಡಿರುವ ದೂರಿನ ಹಿನ್ನೆಲೆ ಲೋಕಾಯುಕ್ತ ಅಧಿಕಾರಿಗಳು ಭದ್ರಾವತಿಯ ಅಂತರಗಂಗೆ ಗ್ರಾ.ಪಂ ಅಧ್ಯಕ್ಷ ಬಿ.ನಾಗೇಶ್‌ಗೆ ಸಂಬಂಧಿಸಿದ ಐದು ಕಡೆಗಳಲ್ಲಿ ಜು: 19ರಂದು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು. 

ಅಕ್ರಮ ಆಸ್ತಿ ಗಳಿಸಿರುತ್ತಾರೆಂಬ ದೂರಿನ ಹಿನ್ನೆಲೆಯಲ್ಲಿ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಕಲಂ 13(1)(ಬಿ) ಸಹಿತ 13(2) ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ- 1988 (ತಿದ್ದುಪಡಿ ಕಾಯ್ದೆ-2018) ರೀತ್ಯಾ ಪ್ರಕರಣ ದಾಖಲಾಗಿರುತ್ತದೆ. 

ಬಿ.ನಾಗೇಶ್ ರವರಿಗೆ ಸಂಬಂದಿಸಿದಂತೆ 2 ಖಾಲಿ ನಿವೇಶನಗಳು, 2 ಮನೆಗಳು, 5.14 ಎಕರೆ ಕೃಷಿ ಜಮೀನು,ಅಂದಾಜು ರೂ 12,80,000/- ಚಿನ್ನಾಭರಣ ಮತ್ತು ಬೆಳ್ಳಿ ವಸ್ತುಗಳು, ಅಂದಾಜು 1,76,000/- ಮೌಲ್ಯದ ವಾಹನಗಳು, ಅಂದಾಜು 7,00,000/- ಮೌಲ್ಯದ ಗೃಹಪಯೋಗಿ ವಸ್ತುಗಳು ಮತ್ತು ರೂ 5,71,640/- ಗಳು ನಗದು ಹಣ ಪತ್ತೆಯಾಗಿದೆ.

ಇದರ ಅಂದಾಜು ಅಂದಾಜು ರೂ 1,33,87,826/- ಮೌಲ್ಯದ ಅಕ್ರಮ ಆಸ್ತಿ ಸಂಪಾದನೆ ಮಾಡಿರುವುದು ತನಿಖೆಯಿಂದ ಕಂಡು ಬಂದಿರುತ್ತದೆ. ಹಾಗೂ ಅವರ ಮನೆಯಲ್ಲಿ ಪತ್ತೆಯಾದ ನಗದು ರೂ 5,00,000/- ಗಳನ್ನು ತನಿಖೆ ಸಂಬಂಧ ಅಮಾನತ್ತು ಪಡಿಸಿಕೊಳ್ಳಲಾಗಿರುತ್ತದೆ. 

ಪ್ರಕರಣವನ್ನು ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಮಂಜುನಾಥ್ ಚೌದರಿ ಎಂ.ಹೆಚ್. ರವರು ದಾಖಲಿಸಿದ್ದು, ಪೊಲೀಸ್ ನಿರೀಕ್ಷಕ ವೀರಬಸಪ್ಪ ಎಲ್ ಕುಸಲಾಪುರ ತನಿಖೆ ಮುಂದುವರೆಸಿರುತ್ತಾರೆ. 

ದಾಳಿ ಸಮಯಕ್ಕೆ ಶಿವಮೊಗ್ಗ, ಚಿತ್ರದುರ್ಗ, ಉಡುಪಿ ಮತ್ತು ಮಂಗಳೂರು ವಿಭಾಗದ ಲೋಕಾಯುಕ್ತ ಅಧಿಕಾರಿ, ಸಿಬ್ಬಂದಿಗಳು ಭಾಗಿಯಾಗಿರುತ್ತಾರೆ ಎಂದು ಲೋಕಾಯುಕ್ತ ಪೊಲೀಸ್ ಪ್ರಕಟಣೆ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು