ಸವಾಲುಗಳ ಮೆಟ್ಟಿ ನಿಲ್ಲುವ ಕೌಶಲ್ಯ ಚಲನಚಿತ್ರ ಛಾಯಾಗ್ರಾಹಕರಿಗಿರಬೇಕು

ವಿಜಯ ಸಂಘರ್ಷ 
ಭದ್ರಾವತಿ: ಚಲನಚಿತ್ರ ಛಾಯಾ ಗ್ರಾಹಕರು ಬದಲಾಗುತ್ತಿರುವ ತಂತ್ರಜ್ಞಾನ ಮತ್ತು ವೃತ್ತಿ ಕೌಶಲ್ಯಗಳನ್ನು ರೂಢಿಸಿಕೊಂಡರೆ ಯಾವುದೇ ಸವಾಲುಗಳನ್ನು ಎದುರಿಸಬಹುದು ಎಂದು ಚಲನಚಿತ್ರ ಛಾಯಾಗ್ರಾಹಕ, ನಿರ್ದೇಶಕ ಡಾ. ಅಶೋಕ್ ಕಶ್ಯಪ್ ಅಭಿಪ್ರಾಯಪಟ್ಟರು.

ಕುವೆಂಪು ವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಚಲನಚಿತ್ರ ಛಾಯಾಗ್ರಹಣದ ಇತ್ತೀಚಿನ ಪ್ರವೃತ್ತಿಗಳ ಕುರಿತು ಮಾತನಾಡಿದರು.

ಎಲ್ಲಾ ಕ್ಷೇತ್ರಗಳಲ್ಲೂ ಡಿಜಿಟಲ್ ತಂತ್ರಜ್ಞಾನದ ಪ್ರಭಾವ ಆಗಿರುವಂತೆ ಚಲನಚಿತ್ರ ಕ್ಷೇತ್ರದಲ್ಲೂ ಸಾಕಷ್ಟು ಪ್ರಭಾವ ಆಗಿದೆ. ಹಿಂದೆ ಚಲನಚಿತ್ರ ಕ್ಷೇತ್ರದಲ್ಲಿ ಮುಂದುವರಿದ ದೇಶದ ತಂತ್ರಜ್ಞಾನ ವನ್ನು ಭಾರತದಲ್ಲಿ ಅಳವಡಿಸಬೇಕಾದರೆ ಹತ್ತಿಪ್ಪತ್ತು ವರ್ಷಗಳು ಬೇಕಾಗುತ್ತಿತ್ತು. ಆದರೆ ಇಂದು ಡಿಜಿಟಲ್ ಕ್ರಾಂತಿಯಿಂದಾಗಿ ಯಾವುದೇ ತಂತ್ರಜ್ಞಾನವನ್ನು ಕ್ಷಣ ಮಾತ್ರದಲ್ಲಿ ಅಳವಡಿಸಿಕೊಳ್ಳುವುದು ಸಾಧ್ಯ ಎಂದರು.

ಇಂದಿನ ಡಿಜಿಟಲ್ ತಂತ್ರಜ್ಞಾನ ದಿಂದಾಗಿ ಕಡಿಮೆ ಅವಧಿ ಹಾಗೂ ಕಡಿಮೆ ಖರ್ಚಿನಲ್ಲಿ ಯಾವುದೇ ಲೊಕೇಶನ್‌ ಗೆ ಹೋಗದೆ ಸ್ಟುಡಿಯೊದಲ್ಲೇ ಕುಳಿತುಕೊಂಡು ಅದ್ಭುತ ಚಿತ್ರಗಳನ್ನು ನಿರ್ಮಾಣ ಮಾಡಬಹುದು ಎಂದು ಅವರು ಹೇಳಿದರು.

ಡಿಜಿಟಲ್ ತಂತ್ರಜ್ಞಾನದಿಂದಾಗಿ ಇಂದು ಚಲನಚಿತ್ರದ ಮಾರುಕಟ್ಟೆ ವಿಸ್ತಾರವಾಗಿದೆ. ಭಿನ್ನ ವೇದಿಕೆಗಳಲ್ಲಿ ಒಂದೇ ದಿನದ ಪ್ರದರ್ಶನದಲ್ಲಿ ಒಂದು ಚಲನಚಿತ್ರವು ತನ್ನ ಖರ್ಚನ್ನು ತುಂಬಿ ಲಾಭ ಗಳಿಸುವ ಮಟ್ಟಿಗೆ ಚಲನಚಿತ್ರ ಮಾರುಕಟ್ಟೆ ಬೆಳೆದಿದೆ. ಅದನ್ನು ಬಳಸಿಕೊಳ್ಳುವ ಸಾಮರ್ಥ್ಯ ಹಾಗೂ ಕೌಶಲ್ಯ ಚಲನಚಿತ್ರ ನಿರ್ಮಾಪಕರಿಗೆ ಇರಬೇಕು. ಕೆಜಿಎಫ್, ಕಾಂತಾರ ದಂತಹ ಚಲನಚಿತ್ರಗಳು ಯಶಸ್ವಿ ಯಾಗಲು ಇದೇಕಾರಣ ಎಂದು ಅವರು ಅಭಿಪ್ರಾಯಿಸಿದರು. 

ಒಂದು ಚಲನಚಿತ್ರ ಯಶಸ್ವಿಯಾಗಲು ಒಂದು ಉತ್ತಮ ಕಥೆ ಹಾಗೂ ಶೀರ್ಷಿಕೆ ಮುಖ್ಯ. ಕಥೆ ಗಟ್ಟಿಯಾಗಿದ್ದರೆ ಅಭಿನಯ, ನಿರ್ದೇಶನ, ಛಾಯಾಗ್ರಹಣ ಮುಂತಾದ ಅಂಶಗಳು ತನ್ನಿಂದ ತಾನೆ ಗಟ್ಟಿಯಾಗುತ್ತವೆ. ಆದ್ದರಿಂದ ಚಲನಚಿತ್ರ ನಿರ್ಮಾಪಕರು ಚಲನಚಿತ್ರದ ವಿವಿಧ ಶಾಖೆಗಳಿಗೆ ಹೊಂದುವ ಗಟ್ಟಿ ಕಥೆಗಳನ್ನು ಆಯ್ಕೆ ಮಾಡಬೇಕೆಂದು ಕರೆ ನೀಡಿದರು.

ಚಲನಚಿತ್ರ ಅಧ್ಯಯನ ಮಾಡುವ ವಿದ್ಯಾರ್ಥಿಗಳು ಚಲನಚಿತ್ರದ ತಂತ್ರಜ್ಞಾನ ಹಾಗೂ ಕೌಶಲ್ಯಗಳನ್ನು ರೂಢಿಸಿಕೊಳ್ಳು ವುದರ ಜೊತೆಗೆ ಅಧ್ಯಯನ ಹಾಗೂ ಸಂಶೋಧನೆ ಮಾಡಬೇಕು. ಜಗತ್ತನ್ನು ಸುತ್ತಾಡುವುದರ ಜೊತೆಗೆ, ಜಗತ್ತಿನ ವಿವಿಧ ದೇಶಗಳ ಅಮೋಘ ಚಲನಚಿತ್ರಗಳ ಅಧ್ಯಯನ ಮಾಡಬೇಕು. ಯಾವುದೇ ಕಥೆಯನ್ನು ಭಿನ್ನವಾಗಿ ಬಿಂಬಿಸುವ ಪ್ರಯತ್ನ ಮಾಡಿದರೆ ಯಶಸ್ವಿ ಚಲನಚಿತ್ರ ಛಾಯಾಗ್ರಾಹಕರಾಗಬಹುದು ಕಿವಿಮಾತು ಹೇಳಿದರು. 

ವಿಭಾಗದ ಪ್ರಾಧ್ಯಾಪಕ ಡಾ.ಸತೀಶ್ ಕುಮಾರ್ ಅಂಡಿಂಜೆ ಸ್ವಾಗತಿಸಿ, ಪ್ರಾಧ್ಯಾಪಕ ಪ್ರೊ. ವರ್ಗೀಸ್ ಪಿ.ಎ. ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು