ವಿಜಯ ಸಂಘರ್ಷ
ಭದ್ರಾವತಿ: ಕ್ಷೇತ್ರದ ಶಾಸಕ ಬಿ.ಕೆ. ಸಂಗಮೇಶ್ ಪುತ್ರ ಬಿ.ಎಸ್. ಬಸವೇಶ್ ಅವರ ಕೊಲೆಗೆ ಜೈಲಿ ನಿಂದಲೇ ಯತ್ನ ನಡೆದಿತ್ತು ಎಂದು ಹಳೇ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆ ಸಂಚಿನ ಆರೋಪದಡಿ ಮುಬಾರಕ್ ಅಲಿಯಾಸ್ ಡಿಚ್ಚಿ ಮುಬಾರಕ್ ಹಾಗೂ ಟಿಪ್ಪು ಎಂಬವರ ವಿರುದ್ಧ ಹಳೇನಗರ ಪೊಲೀಸರು ಎಫ್‌ಐಆರ್ ದಾಖಲಿಸಿ ಕೊಂಡಿದ್ದಾರೆ.
ಮುಬಾರಕ್ ಅಲಿಯಾಸ್ ಡಿಚ್ಚಿ ಮುಬಾರಕ್ ಎಂಬಾತ ಜೈಲಿನಿಂದ ಟಿಪ್ಪು ಎಂಬಾತನಿಗೆ ಕರೆ ಮಾಡಿ ಬಿ.ಎಸ್.ಬಸವೇಶ್ ನಗರದ ಗಾಂಧಿ ಸರ್ಕಲ್ ಬಳಿ ಬಂದಾಗ ಕೊಲೆ ಮಾಡುವಂತೆ ಹೇಳಿದ್ದಾನೆ ಎಂದು ಆರೋಪಿಸಿ ಗುತ್ತಿಗೆದಾರ ಸುನೀಲ್ ಎಂಬವರು ಹಳೇ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಾದ ನಂತರ ಪೊಲೀಸರು, ಟಿಪ್ಪುನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಮುಬಾರಕ್ ಅಲಿಯಾಸ್ ಮುಜ್ಜು ಎಂಬಾತ ಬಂದು ಬಸಣ್ಣ (ಬಸವೇಶ್) ಎಲ್ಲಿದ್ದಾನೆ ಎಂದು ನನ್ನನ್ನು ವಿಚಾರಿಸಿದ್ದ. ಆಗ ಮನೆಯಲ್ಲಿ ಇರಬಹುದು ಎಂದು ಹೇಳಿದ್ದೆ. ಜೈಲಿನಲ್ಲಿರುವ ಡಿಚ್ಚಿ ಮುಬಾರಕ್ ತಕ್ಷಣ ಟಿಪ್ಪು ಎಂಬವನಿಗೆ ಕರೆ ಮಾಡಿ ಬಸವೇಶ್ ಗಾಂಧಿ ಸರ್ಕಲ್ ಬಳಿ ಕ್ಯಾಂಟೀನ್ಗೆ ಬಂದಾಗ ಆತನನ್ನು ಕೊಂದು ಹಾಕುವಂತೆ ಸುಪಾರಿ ನೀಡಿದ್ದ ಎಂದು ಗುತ್ತಿಗೆದಾರ ಸುನೀಲ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.