ಕೈಗಾರಿಕಾ ಕ್ಷೇತ್ರಕ್ಕೆ ಸರ್ ಎಂವಿ ಕೊಡುಗೆ ಅಪಾರ: ಎಸ್.ಎಸ್.ವಾಗೇಶ್

ವಿಜಯ ಸಂಘರ್ಷ ನ್ಯೂಸ್ 
ಶಿವಮೊಗ್ಗ: ಕೈಗಾರಿಕಾ ಕ್ಷೇತ್ರಕ್ಕೆ ಸರ್ ಎಂ.ವಿಶ್ವೇಶ್ವರಯ್ಯ ಅವರ ಕೊಡುಗೆ ಅಪಾರ ಎಂದು ಎಸ್.ಎಸ್.ವಾಗೇಶ್ ಹೇಳಿದರು.

ಗಂಗೋತ್ರಿ ಪಿಯು ಕಾಲೇಜಿನಲ್ಲಿ ರೋಟರಿ ಕ್ಲಬ್ ಜ್ಯೂಬಿಲಿ ವತಿಯಿಂದ ಆಯೋಜಿಸಿದ್ದ ಇಂಜಿನಿಯರ್ಸ್ ಡೇ ಉದ್ಘಾಟಿಸಿ ಮಾತ ನಾಡಿದ ಅವರು, ಸ್ವಾತಂತ್ರ‍್ಯ ಭಾರತದಲ್ಲಿ ದೇಶ ಏಳಿಗೆಯಾಗಲು ಕೈಗಾರಿಕೆಯು ತುಂಬಾ ಅವಶ್ಯಕ ಎಂದು ತಿಳಿಸಿದರು.

ಮೈಸೂರು ದೀವಾನರಾಗಿದ್ದಾಗ ಶಿವಮೊಗ್ಗ ದಲ್ಲಿ ಗಂಧದೆಣ್ಣೆ, ಭದ್ರಾವತಿಯಲ್ಲಿ ಕಬ್ಬಿಣ, ಸಿಮೆಂಟ್ ಕಾರ್ಖಾನೆ ಸ್ಥಾಪಿಸಿದರು. ಇದರಿಂದ ಹಲವರಿಗೆ ಕೆಲಸ ದೊರೆತರೆ ಸಮಾಜದ ಬಹಳಷ್ಟು ಜನರ ಪ್ರಗತಿಗೆ ದಾರಿಯಾಯಿತು. ಭಾರತ ಸರ್ಕಾರ ಇವರ ಕಾರ್ಯವೈಖರಿ ಕಂಡು ಭಾರತರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಇಂತಹ ಮಹಾನ್ ವ್ಯಕ್ತಿ ಕರ್ನಾಟಕದವರು ಎಂಬುದು ಹೆಮ್ಮೆಯ ಸಂಗತಿ ಎಂದರು.

ಲಕ್ಷ್ಮೀನಾರಾಯಣ್, ಭಾರದ್ವಾಜ್, ರಾಜಶೇಖರ್, ರಮೇಶ್, ವೆಂಕಟೇಶ್, ಸಂಪತ್ ಕುಮಾರ್ ಅವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.

ಭಾರದ್ವಾಜ್ ಸನ್ಮಾನಿ ಸ್ವೀಕರಿಸಿ ಮಾತನಾಡಿ, ಸಮಯ ಪಾಲನೆಯಲ್ಲಿ ಸರ್ ಎಂ.ವಿ. ಅವರು ಎತ್ತಿದ ಕೈ. ಅವರನ್ನು ಭೇಟಿ ಮಾಡಲು ಉಕ್ಕಿನ ಮನುಷ್ಯ ಸರ್ದಾರ್ ವಲ್ಲಬಾಯ್ ಪಾಟಿಲ್ ಸಮಯ ನಿಗದಿ ಪಡಿಸಿ, ಕೆಲ ನಿಮಿಷ ತಡವಾಗಿ ಆಗಮಿಸಿದಾಗ ಇವರು ಕಾಯದೆ ತಮ್ಮ ಕರ್ತವ್ಯದ ಮೇಲೆ ಹೋಗಿದ್ದರಿಂದ ಅವರನ್ನು ಮತ್ತೆ ಭೇಟಿ ಮಾಡಲು ಸಾಧ್ಯವಾಗಲಿಲ್ಲವಂತೆ. ಎಲ್ಲರೂ ಸಮಯಕ್ಕೆ ಹೆಚ್ಚಿನ ಮಹತ್ವ ಕೊಡಬೇಕು. ವಿದ್ಯಾರ್ಥಿಗಳು ಸಮಯ ಪಾಲನೆ ಮಾಡಬೇಕು ಎಂದು ತಿಳಿಸಿದರು.

ರೂಪಾ ಪುಣ್ಯಕೊಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ರಾಷ್ಟ್ರದ ಮಹಾನ್ ವ್ಯಕ್ತಿಗಳ ಪರಿಚಯವನ್ನು ನಮ್ಮ ಮುಂದಿನ ಪೀಳಿಗೆಗೆ ತಿಳಿಸಲು ಇಂತಹ ಕಾರ್ಯಕ್ರಮ ಅತ್ಯವಶ್ಯಕ. ಹಿರಿಯರ ಮಾತುಗಳು ಮಕ್ಕಳ ಮನಸ್ಸಿನಲ್ಲಿ ಸ್ಥಿರವಾಗಿ ಉಳಿಯುತ್ತದೆ. ರೊಟರಿ ಜ್ಯೂಬಿಲಿ ಈ ನಿಟ್ಟಿನಲ್ಲಿ ಹೆಚ್ಚಿನ ಮುತುವರ್ಜಿ ವಹಿಸುತ್ತಿದೆ. ಇಂದು ಪುರಸ್ಕಾರ ಸ್ವೀಕರಿಸಿದ ಎಲ್ಲರೂ ಹಲವಾರು ವಿಧದ ತಾಂತ್ರಿಕ ನಿಪುಣರು. ಇವರನ್ನು ಸನ್ಮಾನಿಸಿ ಉತ್ತಮ ಕಾರ್ಯಗಳಿಗೆ ಗೌರವ ನೀಡುತ್ತಿದ್ದೇವೆ ಎಂದರು.

ಕಾರ್ಯದರ್ಶಿ ಡಾ. ಪ್ರಕೃತಿ ಮಂಚಾಲೆ ಪ್ರಾಸ್ತಾವಿಕ ನುಡಿಗಳನ್ನಾಡಿ ಎಲ್ಲರನ್ನು ಸ್ವಾಗತಿಸಿದರು. ರೇಣುಕಾರಾಧ್ಯ ನಿರೂಪಿಸಿದರು. ಸತ್ಯನಾರಾಯಣ್ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು