ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ರಕ್ತದಾನ ಮತ್ತು ಅನ್ನದಾನ ಮನುಷ್ಯನ ಎರಡು ಕಣ್ಣುಗಳಿದ್ದಂತೆ. ಜೀವಗಳನ್ನು ಉಳಿಸಲು ರಕ್ತದಾನ ಮಾಡುವುದು ಅತೀ ಮುಖ್ಯವಾದ ಜನ ಸೇವಾ ಕಾರ್ಯವಾಗಿದೆ. ದೇಶದ ಮುಂದಿನ ಭವಿಷ್ಯತ್ತಿನ ಯುವ ಸಮೂಹವು ಇದನ್ನು ಅರ್ಥೈಸಿಕೊಂಡು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ಮುಂದಾಗಬೇಕೆಂದು ನಗರಸಭೆಯ ಹಿರಿಯ ಸದಸ್ಯ ಬಿ.ಕೆ.ಮೋಹನ್ ಕರೆ ನೀಡಿದರು.
ಅವರು ಬಿ.ಹೆಚ್.ರಸ್ತೆಯ ಕಡದ ಕಟ್ಟೆಯ ಸರಕಾರಿ ಐಟಿಐ ನಲ್ಲಿ ರೋಟರಿ ರಕ್ತ ನಿಧಿ ಸಹಯೋಗದಲ್ಲಿ ದಿ.ಡಾ.ಪ್ರವೀಣ್ ಮತ್ತು ನಾರಾಯಣ ಸ್ವಾಮಿ ನಾಯ್ಡು ಸ್ಮರಣಾರ್ಥ ಏರ್ಪಡಿಸಿದ್ದ ರಕ್ತದಾನ ಮತ್ತು ರಕ್ತ ಗುಂಪು ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ಆರೋಗ್ಯ ವಂತ ವ್ಯಕ್ತಿ 3 ಅಥವಾ 6 ತಿಂಗಳಿ ಗೊಮ್ಮೆ ರಕ್ತದಾನ ಮಾಡುವುದರಿಂದ ಯಾವುದೇ ಅಡ್ಡ ಪರಿಣಾಮಗಳಾಗದೆ ಸದೃಢರಾಗಿರಬಹುದು. ಇದರಿಂದ ಆತ್ಮತೃಪ್ತಿ ಲಭಿಸುತ್ತದೆ. ವಿದ್ಯಾರ್ಥಿಗಳು ಇಂತಹ ಪ್ರಾಣ ಉಳಿಸುವ ಸೇವಾ ಕಾರ್ಯಗಳಲ್ಲಿ ತೊಡಗಿಸಿ ಕೊಂಡರೆ ಉತ್ತಮ ಭವಿಷ್ಯ ರೂಪಿಸಿ ಕೊಳ್ಳಬಹುದು. ವಿದ್ಯಾರ್ಥಿ ಜೀವನ ಬಂಗಾರದ ಹಾದಿ ಎಂಬುದನ್ನು ಮರೆಯದೆ ಸನ್ನಡತೆಯಿಂದ ಹೆಜ್ಜೆ ಹಾಕಬೇಕೆಂದರು.
ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಿ.ಸಿದ್ದಬಸಪ್ಪ ಮಾತನಾಡಿ ರತನ್ ಟಾಟಾ ರವರಂತಹ ಮಹಾನ್ ಆದರ್ಶ ವ್ಯಕ್ತಿಗಳ ಗುಣಗಳನ್ನು ಅಳವಡಿಸಿಕೊಂಡರೆ ಸಾರ್ಥಕ ವಾಗುತ್ತದೆ ಎಮದರು. ಪ್ರಾಚಾರ್ಯ ಕಾಳಿದಾಸ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಬಗರ್ ಹುಕುಂ ಸಮಿತಿ ಮತ್ತು ಗ್ರಾರಂಟಿ ಸಮಿತಿಗಳ ಅಧ್ಯಕ್ಷ ಎಸ್. ಮಣಿಶೇಖರ್, ಉದ್ಯಮಿ ಬಿ.ಕೆ.ಜಗನ್ನಾಥ್, ಆಶ್ರಯ ಸಮಿತಿ ಅಧ್ಯಕ್ಷ ಗೋಪಾಲ್, ದಾನಿಗಳಾದ ಪುಷ್ಪರಾಜ್, ಲಯನ್ಸ್ ಕ್ಲಬ್ ಕೆ.ವಿ. ಚಂದ್ರಶೇಖರ್, ಎನ್. ಶ್ರೀನಿವಾಸ್ ವಾಸನ್ ಐ ಕೇರ್ ಸಂಜಯ್
ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾಲೇಜಿನ ಆಡಳಿತಾಧಿಕಾರಿ ರಂಗನಾಥ್, ಉಪ ಪ್ರಾಚಾರ್ಯ ಮಾಲತೇಶ್ವರ ನಾಯ್ಕ ಸೇರಿದಂತೆ ಅಧ್ಯಾಪಕ ವೃಂದ ಸಿಬ್ಬಂದಿ ಭಾಗವಹಿಸಿದ್ದರು.
ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು. ಶಿವಮೊಗ್ಗದ ವಾಸನ್ ಐ ಕೇರ್ ತಂಡದಿಂದ ನೇತ್ರ ತಪಾಸಣೆ ನಡೆಸಲಾಯಿತು. ವಿದ್ಯಾರ್ಥಿ ಗಳಾದ ವಿನೋದ ಮತ್ತು ಚಂದನ ಪ್ರಾರ್ಥಿಸಿದರು. ಹುತ್ತರ್ ಸ್ವಾಗತಿಸಿದರೆ, ಸರಕಾರಿ ನೌಕರರ ಸಂಘದ ನಿರ್ದೇಶಕ ಪುಟ್ಟಲಿಂಗಮೂರ್ತಿ ಕಾರ್ಯಕ್ರಮ ನಿರೂಪಿಸಿದರು.
Tags
ಭದ್ರಾವತಿ ಸುದ್ದಿ