ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ನಗರದ ಜನ್ನಾಪುರದ ಫಿಲ್ಟರ್ ಶೆಡ್ ನಲ್ಲಿ ಅತಿಹೆಚ್ಚು ಬಡ ಜನರು ವಾಸಿಸುತ್ತಿದ್ದು, ಸ್ಥಳೀಯರ ಸಂಕಷ್ಟಗಳಿಗೆ ಜನಪ್ರತಿನಿಧಿಗಳು ಸ್ಪಂದಿಸುವ ಮೂಲಕ ನೆರವಿಗೆ ಮುಂದಾಗಬೇಕು ಎಂದು ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಎಸ್.ಗೌಡ ಹೇಳಿದರು.
ಫಿಲ್ಟರ್ ಶೆಡ್ ನಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ 69 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ನೇತೃತ್ವವಹಿಸಿ ಮಾತನಾಡಿ, ಸ್ಥಳೀಯ ನಿವಾಸಿಗಳಿಗೆ ಹಕ್ಕು ಪತ್ರ ನೀಡಿಲ್ಲ. ಹಲವು ಮೂಲ ಸೌಕರ್ಯಗಳ ಕೊರತೆ ಇದೆ , ಶೆಡ್ ನಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿ ರುವ ಸಮುದಾಯ ಭವನದ ವಿರುದ್ಧ ಹೋರಾಟ ನಡೆಸಲಾಗುತ್ತಿದೆ. ನ್ಯಾಯಬದ್ಧ ವಾದ ಹೋರಾಟಗಳಿಗೆ ಎಲ್ಲರೂ ಸಹಕರಿಸ ಬೇಕೆಂದರು.
ಈ ಹೋರಾಟದ ಹಿಂದೆ ಯಾವುದೇ ದುರುದ್ದೇಶವಿಲ್ಲ. ನಿರ್ಮಿಸಿರುವ ಸಮುದಾಯ ಭವನ ಫಿಲ್ಟರ್‌ಶೆಡ್ ನಿವಾಸಿಗಳ ಕಲ್ಯಾಣ ಕಾರ್ಯಕ್ರಮ ಗಳಿಗೆ ಸದ್ಬಳಕೆಯಾಗಬೇಕೆಂದರು.
ಸ್ಥಳೀಯ ಮುಖಂಡ ಉಮೇಶ್ ಮಾತನಾಡಿ, ಸರ್ಕಾರಿ ಜಾಗದಲ್ಲಿ ವಾಸಿಸುತ್ತಿರುವ ಬಡ ಜನರಿಗೆ ಹಕ್ಕು ಪತ್ರ ನೀಡದಿರುವುದು ವಿಪರ್ಯಾಸದ ಸಂಗತಿಯಾಗಿದೆ. ಇಲ್ಲಿನ ಜನರ ಹೋರಾಟಕ್ಕೆ ನಮ್ಮ ಬೆಂಬಲವಿದ್ದು, ಅನಧಿಕೃತ ಸಮುದಾಯ ಭವನದ ವಿರುದ್ಧ ನಡೆಯುತ್ತಿರುವ ನ್ಯಾಯಬದ್ಧ ವಾದ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಅಗತ್ಯವಿದೆ ಎಂದರು.
ನಗರಸಭೆ ಸದಸ್ಯರಾದ ಮೋಹನ್ ಕುಮಾರ್, ಸವಿತಾ ಉಮೇಶ್, ನಾಗರತ್ನ ಅನಿಲ್ ಕುಮಾರ್, ಆರ್. ಮತ್ತಿತರರು ಮಾತನಾಡಿದರು.
ದಿವ್ಯಶ್ರೀ ಶಶಿಕುಮಾರ್ ಗೌಡ, ಆರ್ಮುಗಂ ಸೇರಿದಂತೆ ಸ್ಥಳೀಯ ನಾಗರಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.