ವಿಜಯ ಸಂಘರ್ಷ ನ್ಯೂಸ್
ಶಿವಮೊಗ್ಗ: ಕನ್ನಡ ಭಾಷೆಯ ಮಹತ್ವ, ಕಲೆ ಸಂಸ್ಕೃತಿಯನ್ನು ಮಕ್ಕಳಿಗೆ ಪೋಷಕರು ಕಲಿಸಬೇಕು ಎಂದು ಶಿವಗಂಗಾ ಯೋಗಕೇಂದ್ರದ ಗುರು ರುದ್ರಾರಾಧ್ಯ ಹೇಳಿದರು.
ಕೃಷಿನಗರದ ಶಿವಗಂಗಾ ಯೋಗ ಕೇಂದ್ರ, ಎಲ್ಬಿಎಸ್ ಶಾಖೆಯ ಶಿಕ್ಷಕರು, ಶಿಕ್ಷಣಾರ್ಥಿಗಳಿಂದ ರೋಟರಿ ರಿವರ್ ಸೈಡ್ನಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಕನ್ನಡ ಉಳಿಸಿ ಬೆಳೆಸುವ ಕಾಯಕದಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು. ಶಿವಗಂಗಾ ಯೋಗ ಮನೆಮಾತಾಗಲು ದಿನನಿತ್ಯ ಯೋಗ ಮಾಡಲು ಸ್ಥಳವಾಕಾಶ ಸೇರಿ ಎಲ್ಲ ಸೌಲಭ್ಯ ನೀಡುತ್ತಿರುವ ರೋಟರಿ ಸಂಸ್ಥೆಗೆ ನಾವೆಲ್ಲಾ ಚಿರಋಣಿ ಎಂದರು.
ರೋಟರಿ ಅಧ್ಯಕ್ಷ ಸೂರ್ಯ ನಾರಾಯಣ ಉಡುಪ ಮಾತನಾಡಿ, ಶಿವಗಂಗಾ ಯೋಗ ಕೇಂದ್ರ ಮನೆ ಮನೆಗೆ ಯೋಗ ತಲುಪಿಸುವ ಮಹತ್ಕಾರ್ಯ ಮಾಡುತ್ತಿದೆ. ಕನ್ನಡ ಕಲೆ, ಸಂಸ್ಕೃತಿ ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿದೆ. ಕೇಂದ್ರದ ಎಲ್ಲ ಕಾರ್ಯಕ್ರಮ ಗಳಿಗೆ ನಮ್ಮ ಸಹಕಾರ ಇರುತ್ತದೆ ಎಂದು ಭರವಸೆ ನೀಡಿದರು.
ಉಷಾ ಉಡುಪ ಮಾತನಾಡಿ, ಇಂತಹ ಕಾರ್ಯಕ್ರಮದಿಂದ ಮಕ್ಕಳಲ್ಲಿ ಕನ್ನಡದ ಬಗ್ಗೆ ಅಭಿಮಾನ ಪ್ರೀತಿ ಬೆಳೆಯುತ್ತದೆ. ಹೆಚ್ಚೆಚ್ಚು ಮಕ್ಕಳನ್ನು ಇಂತಹ ಕಾರ್ಯಕ್ರಮಗಳಿಗೆ ಕರೆದುಕೊಂಡು ಬರಬೇಕು ಎಂದರು.
ರೋಟರಿ ರಿವರ್ ಸೈಡ್ ಅಧ್ಯಕ್ಷ ಬಸವರಾಜ್.ಎಂ.ಆರ್. ಮಾತನಾಡಿ, ಕೃಷಿನಗರದ ಯೋಗ ಸಂಸ್ಥೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡುವಾಗ ಕೈಜೋಡಿಸುತ್ತೇವೆ ಎಂದು ತಿಳಿಸಿದರು.
ಕಾರ್ಯದರ್ಶಿ ವಿನಯ್.ಸಿ.ಬಿ., ಚಂದ್ರಶೇಖರ, ನೀಲಕಂಠ ರಾವ್, ಸುರೇಶ್.ವೈ.ಜೆ, ಮಹಾಬಲೇಶ್ವರ ಹೆಗಡೆ, ಜಿ.ವಿಜಯಕುಮಾರ್, ಸಿದ್ದರಾಮಪ್ಪ, ಬಿಂದು ವಿಜಯ ಕುಮಾರ್, ಚಂದ್ರಶೇಖರಯ್ಯ, ನೀಲಕಂಠರಾವ್, ಸುರೇಶ್, ಶುಭದಾ ಹೆಗಡೆ, ನಾಗರತ್ನಮ್ಮ ಚಂದ್ರ ಶೇಖರಯ್ಯ, ಮಮತಾ, ದ್ರಾಕ್ಷಾಯಿಣಿ, ಅರುಣಾ ಉಪಸ್ಥಿತರಿದ್ದರು.
ಮೂರು ಕೇಂದ್ರದ ಶಿಕ್ಷಣಾರ್ಥಿಗಳಿಂದ ಮನಮೋಹಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ನೂರಕ್ಕೂ ಹೆಚ್ಚು ಯೋಗ ಕಲಿಕಾರ್ಥಿ ಗಳು ಭಾಗವಹಿಸಿದ್ದರು. ಮನರಂಜನೆ ಕಾರ್ಯಕ್ರಮ, ಹಾಡು, ನೃತ್ಯ, ಕಿರು ನಾಟಕ ನಡೆದವು.
ಕಾರ್ಯಕ್ರಮದಲ್ಲಿ 60 ವರ್ಷಕ್ಕೂ ಮೇಲ್ಪಟ್ಟವರು ಉತ್ಸಾಹದಿಂದ ಪಾಲ್ಗೊಂಡಿದ್ದರು.
Tags:
ಶಿವಮೊಗ್ಗ ಸುದ್ದಿ