ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ಗೃಹ ಲಕ್ಷ್ಮೀ ಹಣದಿಂದ ಕೆಲವು ಮಹಿಳೆಯರು ವಿವಿಧ ಉದ್ದೇಶಗಳಿಗೆ ಬಳಕೆ ಮಾಡಿಕೊಂಡು ಸುದ್ದಿಯಾದರೆ, ಭದ್ರಾವತಿ ತಾಲ್ಲೂಕಿನ ಯಡೇಹಳ್ಳಿ ಗ್ರಾಮದ ಖುರ್ಷಿದ್ ಎಂಬ ವಿಧವೆ ಮಹಿಳೆ ಗೃಹ ಲಕ್ಷ್ಮೀ ಹಣದಿಂದ ಚಿಕ್ಕದಾದ ಒಂದು ಅಂಗಡಿಯನ್ನು ತೆರೆಯುವ ಮೂಲಕ ಇತರರಿಗೆ ಪ್ರೇರಣೆಯಾಗಿದ್ದಾರೆ.
ಖುರ್ಷಿದ್ ಮೂಲತಃ ಬಡವಿ. 14 ವರ್ಷಗಳ ಹಿಂದೆ ತನ್ನ ಒಬ್ಬನೇ ಮಗನನ್ನು ಮತ್ತು 12 ವರ್ಷಗಳ ಹಿಂದೆ ಗಂಡನನ್ನು ಕಳೆದುಕೊಂಡು ಒಂಟಿಯಾಗಿ ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ.
ಇಂತಹ ಮಹಿಳೆ ಗೃಹಲಕ್ಷ್ಮಿಯ ಪ್ರತೀ ತಿಂಗಳ ಎರಡು ಸಾವಿರ ರೂಪಾಯಿಗಳನ್ನು ಕೂಡಿಟ್ಟು ಒಂದು ಚಿಕ್ಕದಾದ ಅಂಗಡಿಯನ್ನು ತೆರೆದು ಬದುಕು ಸಾಗಿಸಲು ಮುಂದಾಗಿದ್ದಾರೆ. ಆದ್ದರಿಂದ ಗ್ರಾಮದ ಕೆಲವು ಆಸಕ್ತರನ್ನು ಕರೆದು ಅಂಗಡಿಯ ಉದ್ಘಾಟನೆಯನ್ನೂ ಮಾಡಿದರು. ಆಗಮಿಸಿದ ಎಲ್ಲರೂ ಶುಭ ಕೋರಿದ್ದಾರೆ.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಮನು, ಗ್ರಾಪಂ ಸದಸ್ಯ ಮಹಮದ್ ಅಲಿ, ಎಸ್.ಎಂ.ಹಾಲೇಶಪ್ಪ, ನಾಗರಾಜ್ ಗೌಡ, ಪಿ.ಎನ್.ಜಗದೀಶ್, ಸಾಹಿಲ್, ಇಮ್ರಾನ್, ಆದಿಲ್, ಬಾಷಾ ಸೇರಿದಂತೆ ಇತರರಿದ್ದರು.