ನೂತನ ವರ್ಷದ ದಿನವೇ ಲೋಕಾ ದಾಳಿ: ಲಂಚಕ್ಕೆ ಬೇಡಿಕೆ ಇಟ್ಟ ಅಧಿಕಾರಿಗಳಿಬ್ಬರು ಅಂದರ್

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಗುತ್ತಿಗೆದಾರರೊಬ್ಬರಿಗೆ ಹಣ ಮಂಜೂರು ಮಾಡಲು 1.20 ಲಕ್ಷ ರೂ. ಲಂಚ ಪಡೆಯುತ್ತಿದ್ದ ಅಧಿಕಾರಿ ಯೊಬ್ಬರ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಲಂಚದ ಹಣವನ್ನು ವಶಕ್ಕೆ ಪಡೆದು, ಇಬ್ಬರು ಅಧಿಕಾರಿಗಳನ್ನು ಬಂಧಿಸಿದ್ದಾರೆ.

ತಾಲೂಕಿನ ಗೋಂದಿಯ ಭದ್ರಾ ಬಲದಂಡೆ ನಾಲೆಯ ಸಿಲ್ಟ್‌ ತೆಗೆಯುವ ಕಾಮಗಾರಿಯು 2024ರ ಜನವರಿ ಯಲ್ಲಿ ಪೂರ್ಣಗೊಂಡಿತ್ತು. ಆದರೆ ಟೆಂಡರ್‌ ಹಣ 9.16 ಲಕ್ಷ ರೂ. ಗುತ್ತಿಗೆ ದಾರರಿಗೆ ಮಂಜೂರಾಗಿರಲಿಲ್ಲ. ಹಾಗಾಗಿ ಗುತ್ತಿಗೆದಾರ ವಿ.ರವಿ ಹಲವು ಬಾರಿ ಹಣ ಮಂಜೂರಾತಿಗಾಗಿ ಮನವಿ ಮಾಡಿದ್ದರು. 

ಈಚೆಗೆ ನೀರಾವರಿ ನಿಗಮದ ಸೆಕ್ಷನ್‌ ಆಫೀಸರ್‌ ಕೊಟ್ರಪ್ಪ ಬಿಲ್‌ ಮಂಜೂರಾಗಬೇಕಿದ್ದರೆ 1.20 ಲಕ್ಷ ರೂ.ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ.

ಸೆಕ್ಷನ್‌ ಆಫೀಸರ್‌ ಕೊಟ್ರಪ್ಪ ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುವ ಕುರಿತು ಗುತ್ತಿಗೆದಾರ ರವಿ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಇವತ್ತು ಬಿಆರ್‌ಪಿ ವ್ಯಾಪ್ತಿಯ ಡಿ.ಬಿ. ಹಳ್ಳಿಯ ಕಚೇರಿಯಲ್ಲಿ ಗುತ್ತಿಗೆದಾರ ರವಿ ಅವರಿಂದ 1.20 ಲಕ್ಷ ರೂ. ಲಂಚದ ಹಣ ಪಡೆಯುತ್ತಿದ್ದ ಸಂದರ್ಭ ಸೆಕ್ಷನ್‌ ಆಫೀಸರ್‌ ಕೊಟ್ರಪ್ಪ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ರೆಡ್‌ ಹ್ಯಾಂಡ್‌ ಆಗಿ ಬಂಧಿಸಿ ದ್ದಾರೆ. ಕಚೇರಿಯ ಲೈಟ್‌ ಮಜದೂರ್‌ ಅರವಿಂದ್‌ ಎಂಬಾತನನ್ನು ಬಂಧಿಸಲಾಗಿದೆ ಎಂದು ಲೋಕಾಯುಕ್ತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಲೋಕಾಯುಕ್ತ ಪೊಲೀಸ್‌ ಅಧೀಕ್ಷಕ ಮಂಜುನಾಥ ಚೌದರಿ ಎಂ.ಹೆಚ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಲೋಕಾಯುಕ್ತ ಪೊಲೀಸ್ ಇನ್ಸ್‌ಪೆಕ್ಟರ್ ಹೆಚ್.ಎಸ್ ಸುರೇಶ್, ಪ್ರಕಾಶ್, ಸಿಬ್ಬಂದಿ ಯೋಗೇಶ್, ಟೀಕಪ್ಪ, ಸುರೇಂದ್ರ, ಮಂಜುನಾಥ್, ಪ್ರಶಾಂತ್ ಕುಮಾರ್, ಚೆನ್ನೇಶ್, ಅರುಣ್ ಕುಮಾರ್, ದೇವರಾಜ್, ಪ್ರಕಾಶ್, ಆದರ್ಶ, ಪುಟ್ಟಮ್ಮ.ಎನ್, ಅಂಜಲಿ, ಗಂಗಾಧರ, ಪ್ರದೀಪ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು