ವಿಜಯ ಸಂಘರ್ಷ ನ್ಯೂಸ್
ಶಿವಮೊಗ್ಗ: ಸುಗಮ ಸಂಗೀತದ ಕಲಿಕೆಯು ಆತ್ಮವಿಶ್ವಾಸ ವೃದ್ಧಿಸುವ ಜತೆಯಲ್ಲಿ ಉತ್ತಮ ಬದುಕು ರೂಪಿಸಿ ಕೊಳ್ಳಲು ನೆರವಾಗುತ್ತದೆ. ಕಲಾವಿದ ರಿಗೆ ವಿಶೇಷ ಸ್ಥಾನಮಾನ ನೀಡುತ್ತದೆ ಎಂದು ಬೆಂಗಳೂರಿನ ಕೆ.ಎಸ್. ನರಸಿಂಹಸ್ವಾಮಿ ಟ್ರಸ್ಟ್ ಅಧ್ಯಕ್ಷ ಡಾ.ಕಿಕ್ಕೇರಿ ಕೃಷ್ಣಮೂರ್ತಿ ಹೇಳಿದರು.
ಮಥುರಾ ಪ್ಯಾರಾಡೈಸ್‌ನಲ್ಲಿ ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾ ಘಟಕ, ಶಿವಮೊಗ್ಗ ಚಿರಂತನ ಯೋಗ ಮತ್ತು ಸಂಗೀತ ಟ್ರಸ್ಟ್, ಶಿವಮೊಗ್ಗ ವಿಜಯಪಥ ಮತ್ತು ವಿಕಾಸ ರಂಗ ವತಿಯಿಂದ ಆಯೋಜಿಸಿದ್ದ “ಒಲುಮೆಯ ಗೂಡು ಕುವೆಂಪು ಹಾಡು” ರಾಷ್ಟ್ರಕವಿ ಕುವೆಂಪು ಹಾಗೂ ಸಿ.ಅಶ್ವತ್ಥ್ ಜನ್ಮದಿನದ ಪ್ರಯುಕ್ತ ಗೀತಗಾಯನ ಸ್ಪರ್ಧೆಯ ಬಹುಮಾನ ವಿತರಣೆ, ಭೂಪಾಳಂ ವಿಜಯ ಕುಮಾರ್ ಸಮೂಹ ಗಾಯನ ಹಾಗೂ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಶಿವಮೊಗ್ಗ ಸಾಂಸ್ಕೃತಿಕ ಕ್ಷೇತ್ರದ ತವರೂರು. ಸಂಗೀತ ಕ್ಷೇತ್ರಕ್ಕೆ ಸುಗಮ ಸಂಗೀತ ಕ್ಷೇತ್ರದ ಕೊಡುಗೆ ಅಪಾರ. ಸುಗಮ ಸಂಗೀತ ಕಲಿಕೆಗೆ ಶ್ರದ್ಧೆ, ಭಕ್ತಿ, ಏಕಾಗ್ರತೆ ಹಾಗೂ ಶ್ರಮ ಬಹಳ ಮುಖ್ಯ. ಮುಂದಿನ ದಿನಗಳಲ್ಲಿ ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್ ವತಿಯಿಂದ ರಂಗಮಂದಿರದಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸ ಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಎನ್. ಗೋಪಿನಾಥ್ ಮಾತನಾಡಿ, ಸುಗಮ ಸಂಗೀತ ನಮ್ಮ ಬದುಕಿಗೆ ಅತ್ಯಂತ ಅವಶ್ಯ. ತನ್ನದೇ ಆದ ವಿಶೇಷ ಸ್ಥಾನಮಾನ ಹೊಂದಿದೆ. ನಾಡಿನ ದಿಗ್ಗಜ ಹಾಡುಗಾರರು ಮೂಲತಃ ಸುಗಮ ಸಂಗೀತ ಕ್ಷೇತ್ರದಿಂದ ಬಂದಿರುವವರು ಎಂದರು.
ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಪ್ರಸಿದ್ಧ ಗಾಯಕರಿಂದ ಗಾಯನ ಕಾರ್ಯಕ್ರಮ ನಡೆಯಿತು. ಕರ್ನಾಟಕ ಸಂಘದ ಕಾರ್ಯದರ್ಶಿ ವಿನಯ್ ಶಿವಮೊಗ್ಗ, ಸುವರ್ಣ ವಿಜಯಕುಮಾರ್, ಪರಿಷತ್ ರಾಜ್ಯ ಘಟಕ ದ ಖಜಾಂಚಿ ವಿನಯ್ ಉಡುಪ, ಜಿಲ್ಲಾ ಖಜಾಂಚಿ ಜಿ. ವಿಜಯಕುಮಾರ್, ಟಿ.ಆರ್.ಅಶ್ವತ್ಥ್ ನಾರಾಯಣ ಶೆಟ್ಟಿ, ರವಿ ಚವ್ಹಾಣ್, ಚಿರಂತನ ಯೋಗ ಮತ್ತು ಸಂಗೀತ ಟ್ರಸ್ಟ್ ಸ್ಥಾಪಕಿ ಶಾಂತಾಶೆಟ್ಟಿ, ಕಾರ್ಯದರ್ಶಿ ಮಂಜುನಾಥ್ ಉಪಸ್ಥಿತರಿದ್ದರು.
Tags:
ಶಿವಮೊಗ್ಗ ವರದಿ