ಸಾರ್ವಜನಿಕ ಸಂಪರ್ಕ ನಂಟು ಅಂಚೆ ಪೆಟ್ಟಿಗೆ

ವಿಜಯ ಸಂಘರ್ಷ ನ್ಯೂಸ್ 
ಆಧುನಿಕ ಸಂಪರ್ಕ ಸಾಧನಗಳ ಭರಾಟೆ ಯಲ್ಲಿ ಮರೆಯಾಗುತ್ತಿರುವ ಅನೇಕ ವಸ್ತುಗಳಲ್ಲಿ 'ಅಂಚೆ ಪೆಟ್ಟಿಗೆ' ಕೂಡ ಒಂದು.

 ರಸ್ತೆಯ ಮೂಲೆಗಳಲ್ಲಿ, ಸರ್ಕಾರಿ ಕಚೇರಿಗಳ ಹೊರಗೆ ಕೆಂಪು ಬಣ್ಣದಲ್ಲಿ ನಿಂತಿರುವ ಈ ಪೆಟ್ಟಿಗೆ, ಕೇವಲ ಪೆಟ್ಟಿಗೆಯಲ್ಲ ಅದು ಕೋಟ್ಯಂತರ ಭಾವನೆಗಳು, ಸುದ್ದಿ ಮತ್ತು ಸಂಬಂಧ ಗಳನ್ನು ಹೊತ್ತೊಯ್ಯುವ ಒಂದು ಮಹತ್ವದ ಸೇತುವೆಯಾಗಿತ್ತು.

ಇಂದು ಮೊಬೈಲ್ ಮತ್ತು ಇಂಟರ್ನೆಟ್ ಮೂಲಕ ಕ್ಷಣಾರ್ಧದಲ್ಲಿ ಮಾಹಿತಿ ವಿನಿಮಯವಾಗುತ್ತಿದ್ದರೂ, ಒಂದು ಕಾಲದಲ್ಲಿ ಅಂಚೆ ಪೆಟ್ಟಿಗೆಯೇ ಸಂವಹನದ ಪ್ರಮುಖ ಕೇಂದ್ರವಾಗಿತ್ತು. ಪ್ರೀತಿಪಾತ್ರರಿಗೆ ಬರೆದ ಪತ್ರಗಳು, ಸರ್ಕಾರಿ ಕೆಲಸದ ಅರ್ಜಿಗಳು, ಶುಭಾಶಯ ಪತ್ರಗಳು, ತಮ್ಮ ಸಮಸ್ಯೆ ಗಳು ಹೀಗೆ ಎಲ್ಲವನ್ನು ಈ ಪತ್ರದ ಮೂಲಕವೇ ತಲುಪಬೇಕಾಗಿತ್ತು. ಮತ್ತು ಕೈಬರಹದ ಪತ್ರವನ್ನು ಮಡಚಿ, ಮುದ್ರೆ ಯೊತ್ತಿ, ಎಚ್ಚರಿಕೆಯಿಂದ ಪೆಟ್ಟಿಗೆಯ ಬಾಯಿಗೆ ಬಿಡುವ ಆ ಕ್ಷಣದಲ್ಲಿ ಒಂದು ನಿರೀಕ್ಷೆ ಮತ್ತು ನಂಬಿಕೆ ಇರುತ್ತಿತ್ತು. ನಮ್ಮ ಮಾತನ್ನು ನಮ್ಮವರಿಗೆ ತಲುಪಿಸುತ್ತಾರೆ ಎಂಬ ದೃಢ ವಿಶ್ವಾಸದಲ್ಲಿ ಕಾಯುತ್ತಿದ್ದರು.

ಹಿಂದಿನ ದಿನಗಳಲ್ಲಿ, ಅಂಚೆ ಪೆಟ್ಟಿಗೆಯ ಬಳಿ ಹೋಗಿ ನಿಲ್ಲುವುದು ಒಂದು ಸಣ್ಣ ಸುಂದರ ಕ್ಷಣ ಇರಬಹುದು ಪತ್ರವನ್ನು ಹಾಕಿದ ನಂತರ, ಪೆಟ್ಟಿಗೆಯನ್ನು ತೆರೆದು ಪತ್ರಗಳನ್ನು ಸಂಗ್ರಹಿಸಿಕೊಂಡು ಬರುವ ಅಂಚೆಯಣ್ಣನ ಆಗಮನಕ್ಕಾಗಿ ಕಾಯುವುದೂ ಒಂದು ರೋಮಾಂಚನ ಕಾರಿ ಅನುಭವವಾಗಿತ್ತು. ಆತನ ಕೈಯಲ್ಲಿರುವ ಚೀಲದಲ್ಲಿ ನಮ್ಮ ಪತ್ರ ಗಳು ಸುರಕ್ಷಿತವಾಗಿವೆ ಎಂಬ ಭಾವನೆಯು ನೆಮ್ಮದಿ ನೀಡುತ್ತಿತ್ತು. 

ಕಾಲ ಬದಲಾದಂತೆ, ಪತ್ರಗಳ ಸ್ಥಾನವನ್ನು ಇಮೇಲ್‌ಗಳು, ವಾಟ್ಸಾಪ್ ಸಂದೇಶಗಳು ಆಕ್ರಮಿಸಿಕೊಂಡವು. ಅಂಚೆ ಪೆಟ್ಟಿಗೆಗಳ ಬಳಕೆ ಕಡಿಮೆ ಯಾಗಿ, ಅನೇಕ ಕಡೆ ಅವುಗಳು ತುಕ್ಕು ಹಿಡಿದು ನಿಷ್ಕ್ರಿಯ ಗೊಂಡಿವೆ. ಇಂದಿನ ಪೀಳಿಗೆಗೆ ಅದು ಕೇವಲ ಒಂದು ಹಳೆಯ ಕಾಲದ ವಸ್ತುವಾಗಿ ಕಾಣ ಬಹುದು. ಆದರೆ, ಅಂಚೆ ಪೆಟ್ಟಿಗೆಯ ಹಿಂದಿರುವ ವ್ಯವಸ್ಥೆ, ಲಕ್ಷಾಂತರ ಮೈಲುಗಳ ದೂರವಿದ್ದರೂ ನಮ್ಮವ ರನ್ನು ಒಂದು ಗೂಡಿಸುತ್ತಿದ್ದ ಪ್ರೀತಿಯ ಜಾಲವನ್ನು ಮರೆಯುವಂತಿಲ್ಲ. 

ಹೌದು ಈ ಅಂಚೆ ಪೆಟ್ಟಿಗೆಯನ್ನು ಜಾಲತಾಣವೇ ಮರೆತು ಹೋಗಿತ್ತು ನನಗೂ ಸಹ ನೆನಪಿರಲಿಲ್ಲ ನಾನು ದಿನನಿತ್ಯ ಶಿವಮೊಗ್ಗದ ಬಸ್ ಸ್ಟ್ಯಾಂಡ್ನಲ್ಲಿ ಬಸ್ಸಿಗೆ ಕಾಯುವ ಸಂದರ್ಭದಲ್ಲಿ ದಿನನಿತ್ಯ ಬೆಳಗ್ಗೆ ಎಂಟು ಗಂಟೆಗೆ ಒಬ್ಬ ಪೋಸ್ಟ್ ಮ್ಯಾನ್ ಒಂದು ವ್ಯಾನ್ ಮೂಲಕ ಹಲವಾರು ಪೋಸ್ಟ್ ಚೀಲಗಳನ್ನು ತುಂಬಿಕೊಂಡು ಬಂದು ಅವುಗಳನ್ನು ತಲುಪಿಸುವ ಸ್ಥಳಗಳಿಗೆ ನೀಡಿ ಮತ್ತೆ ಮುಂದಿನ ಸ್ಥಳಕ್ಕೆ ಅದನ್ನು ತಲುಪಿಸಲು ಹೋಗುತ್ತಿದ್ದನು. ಇದನ್ನು ಕಂಡ ನಾನು ಇಷ್ಟೊಂದು ಪೋಸ್ಟ್ ಚೀಲಗಳು ಈಗಿನ ಕಾಲದಲ್ಲೂ ಈ ರೀತಿ ಪತ್ರಗಳ ಉಪಯೋಗವನ್ನು ಬಳಸಿಕೊಳ್ಳು ತ್ತಾರೆ ಎಂಬ ಒಂದು ಚಿಕ್ಕ ಪ್ರಶ್ನೆ ಮೂಡಿತು. ನಂತರ ಯಾವುದೇ ಸರಕಾರಿ ಕೆಲಸಗಳ ಅರ್ಜಿ ಕೂಡ ಆಗಿರಬಹುದು ಎಂಬ ಸಮರ್ಥನೆ ನಾನೇ ಮಾಡಿಕೊಂಡೆ.

ಇಂದಿನ ಕಲಿಯುಗಕ್ಕೆ ಹೋಲಿಸಿ ಕೊಂಡರೆ ಹಳೆ ಕಾಲವೇ ಚೆನ್ನಾಗಿತ್ತು. ನೆನಪುಗಳು ಸೊಗಸಾಗಿದ್ದವು ಆದರೂ ಕೂಡ ನಮ್ಮ ಭಾವನೆಗಳನ್ನು ಒಂದು ಪತ್ರದ ಮೂಲಕ ಕಳಿಸಲು ಮತ್ತು ಅದಕ್ಕೆ ಪ್ರತಿ ಉತ್ತರ ಬರುವ ತನಕ ಕಾಯುವ ಸಂದರ್ಭ ಅತಿ ಸುಂದರ ವಾಗಿರುತ್ತಿತ್ತು. ಆದರೆ ಹಿಂದಿನ ಮಕ್ಕಳಿಗೆ ಬರವಣಿಗೆ ಕೂಡ ಮರೆತು ಹೋಗುವಂತ ಕಾಲವಾಗಿದೆ. ಆಧುನಿಕ ಸಂಪರ್ಕ ಸೇತುವೆಗಳಲ್ಲಿ ಮುಳುಗಿ ಹೋಗಿದ್ದಾರೆ.

(ಅಂಬಿಕ.ಎಂ.)
ಕುವೆಂಪು ವಿಶ್ವವಿದ್ಯಾಲಯ ಶಂಕರಘಟ್ಟ 
ಪತ್ರಿಕೋದ್ಯಮ ವಿದ್ಯಾರ್ಥಿನಿ.,

2 ಕಾಮೆಂಟ್‌ಗಳು

ನವೀನ ಹಳೆಯದು