ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಕನ್ನಡಕ್ಕೆ ಅಪಾರ ಶಕ್ತಿ ಇದ್ದು, ಬರೆದಂತೆ ಓದಬಲ್ಲ ಅದ್ಭುತ ಭಾಷೆ ಇದಾಗಿದ್ದು, ವಿಶ್ವ ಶ್ರೇಷ್ಠ ಸಾಹಿತ್ಯ ಇದರಿಂದ ಹೊರಬಂದಿದ್ದು ಲಿಪಿಗಳ ರಾಣಿ ಎಂದು ಕರೆಸಿಕೊಂಡ ಸುಂದರ ಭಾಷೆ ಕೂಡ ಇದಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ನಿಕಟ ಪೂರ್ವ ಅಧ್ಯಕ್ಷರು ಹಾಗೂ ಯರೇಹಳ್ಳಿ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕ ಕೋಗಲೂರು ತಿಪ್ಪೇಸ್ವಾಮಿ ಹೇಳಿದರು.
ಹಾಲಪ್ಪವೃತ್ತದಲ್ಲಿ ಶಿವಮೊಗ್ಗ ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ)ಆಶ್ರಯದಲ್ಲಿ ಏರ್ಪಡಿಸಲಾಗಿದ್ದ 70 ನೇ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಇಂದು ಗಡಿನಾಡಲ್ಲಿ ಆಗುತ್ತಿರುವ ಶೋಷಣೆ ಪ್ರಸ್ತಾಪಿಸಿ ಕನ್ನಡಾಭಿಮಾನಿಗಳು ಗಮನ ಹರಿಸಬೇಕು ಎಂದು ಕರೆ ನೀಡಿದರು.
ಸುಂದರ ಲಿಪಿಗಳಲ್ಲಿ ವಿಶ್ವದ 3 ನೇ ಸುಂದರ ಲಿಪಿ ಎಂಬ ಹೆಗ್ಗಳಿಕೆ ಕನ್ನಡ ಭಾಷೆಗಿದೆ. ಕನ್ನಡ ಭಾಷೆ ಉಳಿಸಿ ಬೆಳೆಸುವ ಕಾರ್ಯ ಆಗಬೇಕಿದೆ. ಬಳ್ಳಾರಿಯ ಆಲೂರು, ಆದಾನಿ, ಬೆಳಗಾವಿಯ ಅನೇಕ ಪ್ರದೇಶ ಗಳು, ಕೇರಳದ ಕಾಸರಗೋಡು, ಬೆಂಗಳೂರು ಭಾಗದ ಹೊಸೂರಿನ ಕೆಲವು ಪ್ರದೇಶ ಗಳು ಈಗಾಗಲೇ ಕರ್ನಾಟಕದಿಂದ ಕೈತಪ್ಪಿದ್ದು ಬೆಂಗಳೂರಿನಲ್ಲಿ, ಕನ್ನಡ ಮಾತನಾಡುವವರ ಸಂಖ್ಯೆ ಶೇ: 30 ಭಾಗಕ್ಕೆ ಇಳಿದ್ದಿದ್ದು ಇನ್ನಾದರೂ ನಾವು ಎಚ್ಚರ ಗೊಳ್ಳಲೆಬೇಕು. ಕರ್ನಾಟಕದ ನೆಲ, ಜಲ, ಭಾಷೆ ಉಳಿವಿಗಾಗಿ ಎಲ್ಲ ಪ್ರಯತ್ನ ದ ಅಗತ್ಯತೆ ಇದೆ ಎಂದರು.
ನಗರ ಸಭಾ ಉಪಾಧ್ಯಕ್ಷರ ಎ ಎನ್ ಎಸ್ ಮಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಲಾವಿದರು ಎಂದೆಂದಿಗೂ ಜೀವಂತ ಅನ್ನುವುದಕ್ಕೆ ಈ ವೇದಿಕೆ ಕಾರಣ. ಜೂನಿಯರ್ ರಾಜ್, ವಿಷ್ಣು, ಶಂಕರ್ ನಾಗ್, ಅಂಬರೀಷ್ ಬಂದು ಹೋಗಿದ್ದು ಸಾಕ್ಷಿ ಎಂದರು.
ರಕ್ಷಣಾ ವೇದಿಕೆಯ (ಪ್ರವೀಣ್ ಶೆಟ್ಟಿ ಬಣದ) ತಾಲೂಕು ಅಧ್ಯಕ್ಷ ಮುರುಳಿ, ಶಿಕ್ಷಣ ಸಮಿತಿ ಅಧ್ಯಕ್ಷ ಸಿ ಜಯಪ್ಪ, ಪ್ರಮುಖರಾದ ಜುಂಜಾನಾಯ್ಕ್, ಮೈಲಾರಪ್ಪ, ವೈ.ಕೆ.ಹನುಮಂತಯ್ಯ, ಕಮಲಕುಮಾರಿ, ಮಂಜುನಾಥ್ ಸೇರಿದಂತೆ ಕನ್ನಡ ಅಭಿಮಾನಿಗಳು ಉಪಸ್ಥಿತರಿದ್ದರು.