ಭದ್ರಾವತಿ-ಪೊಲೀಸರ ಮೇಲೆ ಹಲ್ಲೆಗೈದ ಡಿಚ್ಚಿ ಕಾಲಿಗೆ ಫೈರ್ :ಎಸ್ ಪಿ ಏನು ಹೇಳಿದ್ರು..?

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಶುಕ್ರವಾರವಷ್ಟೇ ಜೈಲಿನಿಂದ ಬಿಡುಗಡೆಯಾಗಿ, ಮತ್ತೆ ಡಕಾಯಿತಿಗೆ ಹೊಂಚು ಹಾಕಿದ್ದ ರೌಡಿಶೀಟರ್ ಕಾಲಿಗೆ ಶನಿವಾರ ಸಂಜೆ ಪೊಲೀಸರು ಗುಂಡು ಹೊಡೆದಿದ್ದಾರೆ. ಡಿಚ್ಚಿ ಮುಬಾರಕ್ ಎಂಬಾತನೇ ಗುಂಡೇಟು ತಿಂದ ರೌಡಿಶೀಟರ್.

ಮಾರಕಾಸ್ತ್ರಗಳನ್ನು ಹೊಂದಿರುವ ಗುಂಪೊಂದು ದರೋಡೆಗೆ ಹೊಂಚು ಹಾಕಿ ಕುಳಿತಿದೆ ಎಂಬ ಖಚಿತ ಮಾಹಿತಿ ಆಧಾರದಲ್ಲಿ, ಅವರನ್ನು ಬಂಧಿಸಲು ಡಿ.ವೈ.ಎಸ್.ಪಿ ಪ್ರಕಾಶ್ ರಾಥೋಡ್ ನೇತೃತ್ವದ ವಿಶೇಷ ತಂಡ ತೆರಳಿತ್ತು. ಪೊಲೀಸರನ್ನು ಕಂಡ ಕೂಡಲೇ ಆರೋಪಿ ಗಳು ಅವರ ಮೇಲೆ ಕಲ್ಲು ತೂರಿ ಮಾರಕಾಸ್ತ್ರಗಳಿಂದ ದಾಳಿ ನಡೆಸಲು ಮುಂದಾಗಿದ್ದಾರೆ. ಆತ್ಮ ರಕ್ಷಣೆಗಾಗಿ ಪಿಎಸ್‌ಐ ಕೃಷ್ಣಕುಮಾರ್ ಮಾನೆ ಮೊದಲು ಗಾಳಿಯಲ್ಲಿ ಗುಂಡು ಹಾರಿಸಿ ಆರೋಪಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಆದರೂ ಮುಬಾರಕ್ ಚಾಕುವಿನಿಂದ ಪೊಲೀಸರನ್ನು ತಿವಿಯಲು ಮುಂದಾದಾಗ ಆತನ ಕಾಲಿಗೆ ಗುಂಡು ಹಾರಿಸಲಾಗಿದೆ' ಎಂದು ಎಸ್ಪಿ ಬಿ.ನಿಖಿಲ್ ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಪಿಎಸ್‌ಐಗಳಾದ ಕೃಷ್ಣಕುಮಾರ್, ಸಿದ್ದಪ್ಪ ಹಾಗು ಕಾನ್ಸ್ ಟೇಬಲ್ ಆದರ್ಶ್ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮುಬಾರಕ್​ಗೆ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಶಿವಮೊಗ್ಗದ ಮೆಗ್ಗಾನ್​ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈತನ ವಿರುದ್ಧ ಹಲವಾರು ದರೋಡೆ ಪ್ರಕರಣಗಳು ದಾಖಲಾಗಿದ್ದವು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು