ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ : ರಂಗ ಚಟುವಟಿಕೆಗಳು ಕ್ಷೀಣಿಸುತ್ತಿರುವ ಇಂದಿನ ದಿನಗಳಲ್ಲಿ ರಂಗ ಕಲಾವಿದರು ಬದಲಾವಣೆಗಳಿಗೆ ಅನುಗುಣ ವಾಗಿ ಹೊಂದಿಕೊಳ್ಳಬೇಕು ಎಂದು ಪತ್ರಕರ್ತ ಗಂಗಾನಾಯ್ಕ ಗೊಂದಿ ಹೇಳಿದರು.
ಅವರು ನಗರದ ನ್ಯೂಟೌನ್ ಮಹಾತ್ಮ ಗಾಂಧಿ ಉದ್ಯಾನವನದಲ್ಲಿ ರಂಗ ಕಲಾವಿದರ ತಂಡದಿಂದ ವಿಕಸಂ,ಲಲಿತ ಕಲಾ ಸಂಘ, ಶಾಂತಲಾ ಕಲಾ ವೇದಿಕೆ, ಮಿತ್ರ ಕಲಾ ಮಂಡಳಿ ಮತ್ತು ಅಪರಂಜಿ ಅಭಿನಯ ಶಾಲೆ ಹಾಗು ನವೋದಯ ಕಲಾ ಸಂಘದ ಸಹಕಾರದೊಂದಿಗೆ ಆಯೋಜಿಸಲಾಗಿದ್ದ 'ವಿಶ್ವ ರಂಗ ಭೂಮಿ ದಿನಾಚರಣೆ' ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಮಾತನಾಡಿದರು.
ಎಲ್ಲಾ ಕ್ಷೇತ್ರಗಳಲ್ಲೂ ಇಂದು ಬದ ಲಾವಣೆಗಳಾಗುತ್ತಿವೆ. ಅಭಿನಯದ ಮೂಲ ನೆಲೆ ರಂಗಭೂಮಿಯಾಗಿದ್ದು, ಈ ಮೂಲಕ ಗುರುತಿಸಿಕೊಂಡವರು ಇಂದು ಉನ್ನತ ಸ್ಥಾನಕ್ಕೆ ಬೆಳೆದಿದ್ದಾರೆ. ಆದರೆ ಇಂದು ರಂಗ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿಲ್ಲ. ರಂಗಚಟುವಟಿಕೆಗಳ ಹಾಗೂ ಪ್ರಸ್ತುತ ನಮ್ಮೂರಿಗೆ ಬೇಕಾದ ರಂಗಮಂದಿರ ನಿರ್ಮಾಣದ ಅತ್ಯಗತ್ಯ ಇದೆ. ಕಲಾವಿದರ ಹೋರಾಟಕ್ಕೆ ಪ್ರತಿಯೊಬ್ಬರು ಸಹಕಾರ ಅಗತ್ಯ ಎಂದರು.
ಎಂಪಿಎಂ ನಿವೃತ್ತ ನೌಕರ ವಿಕಸಂ ಹಿರಿಯ ರಂಗಭೂಮಿ ಕಲಾವಿದರಾದ ಡಿ.ರುದ್ರಯ್ಯ ವಿಶ್ವ ರಂಗಭೂಮಿ ದಿನಾಚರಣೆಯನ್ನು ಡೊಳ್ಳು ಬಾರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಹಿರಿಯ ರಂಗ ಕಲಾವಿದರಾದ ಶಿವಾನಂದ ಮೂರ್ತಿ ಮತ್ತು ವೈ.ಕೆ ಹನುಮಂತಯ್ಯ ಡಿ.ರುದ್ರಯ್ಯರವರ ಕುರಿತು ಮಾತನಾಡಿ, ಎಲ್ಲಾ ರೀತಿಯ ಅಭಿನಯ ಮಾಡುವ ಕಲೆ ರುದ್ರಯ್ಯ ರವರು ಹೊಂದಿದ್ದರು. ಅವರಿಗೆ ಹಲವಾರು ರಾಷ್ಟ್ರ ಮತ್ತು ರಾಜ್ಯ ಮಟ್ಟದ ಪ್ರಶಸ್ತಿಗಳು ಲಭಿಸಿವೆ. ಇಂತಹ ಹಿರಿಯ ಕಲಾವಿದರಿಂದ ಕಾರ್ಯಕ್ರಮ ಉದ್ಘಾಟಿಸಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.
ರಂಗ ಕಲಾವಿದರು ತಂಡದ ಉಪಾಧ್ಯಕ್ಷ ಜಿ. ದಿವಾಕರ ಅಧ್ಯಕ್ಷತೆ ವಹಿಸಿದ್ದರು.ಗಾಯಕ ಶಂಕರ್ ಬಾಬು ಪ್ರಾರ್ಥಿಸಿ, ಕಾರ್ಯದರ್ಶಿ ತಮಟೆ ಜಗದೀಶ್ ನಿರೂಪಿಸಿದರು.
ಮಿತ್ರ ಕಲಾ ಮಂಡಳಿ ತಂಡದಿಂದ ರಂಗ ಗೀತೆ ಗಾಯನ, ಡಾ.ಬಿ.ಆರ್ ಅಂಬೇಡ್ಕರ್ ಜಾನಪದ ಕಲಾ ಸಂಘದಿಂದ ಕಿರು ನಾಟಕ ನಡೆಯಿತು. ಕಲಾಸಂಘದಿಂದ ಅಭಿನಯಿಸಿದ ಕಿರುನಾಟಕದಲ್ಲಿ ತಮಟೆ ಜಗದೀಶ್, ಪ್ರವೀಣ್ ಕುಮಾರ್.ಬಿ, ರಘು ನಾಯ್ಕ್.ಟಿ, ಮಂಜುಳ.ಎಂ, ರವಿ ಕುಮಾರ್.ಜಿ ಕಲಾವಿದರು ಅಭಿನಯಿಸಿದರು.
ಶಿವಮೊಗ್ಗ ಸಾಂಸ್ಕೃತಿಕ ಕಲಾವಿದರ ಸಂಘದ ಅಧ್ಯಕ್ಷ ಬಿ.ಎ.ಮಂಜುನಾಥ್, ಹಿರಿಯ ರಂಗಭೂಮಿ ಕಲಾವಿದರಾದ ಜಿ. ರವಿಕುಮಾರ್, ಸಂಘದ ಖಜಾಂಚಿ ಕೆ.ಎಸ್.ರವಿಕುಮಾರ್, ಸಹ ಕಾರ್ಯದರ್ಶಿ ಚಿದಾನಂದ.ಬಿ ಸದಸ್ಯರಾದ ಪ್ರವೀಣ್ ಕುಮಾರ್.ಬಿ ,ಮಂಜುಳ.ಎಂ ಹಾಗೂ ರತ್ನ ಸೇರಿದಂತೆ ಕಲಾಭಿಮಾನಿಗಳು ಪಾಲ್ಗೊಂಡಿದ್ದರು.