ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಜೆಡಿಎಸ್ ರಾಜ್ಯ ಕಾರ್ಯದರ್ಶಿ ಶಾರದಾ ಅಪ್ಪಾಜಿ ಅವರ ನೇತೃತ್ವದ ನಿಯೋಗ ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ವಿಐಎಸ್‌ಎಲ್ ಕಾರ್ಖಾನೆ ಕುರಿತು ಚರ್ಚೆ ನಡೆಸಿತು.
ಬೆಂಗಳೂರಿನ ತಮ್ಮ ನಿವಾಸದಲ್ಲಿ ಭೇಟಿಯಾದ ನಿಯೋಗದೊಂದಿಗೆ ಚರ್ಚೆ ನಡೆಸಿದ ಸಚಿವರು, ಕಾರ್ಖಾನೆ ಅಭಿವೃದ್ಧಿಗೆ ಅಗತ್ಯವಿರುವ ಬಂಡವಾಳವನ್ನು ಜುಲೈ ಅಂತ್ಯದ ವೇಳೆಗೆ ತರುವುದಾಗಿ ತಿಳಿಸಿದ್ದಾರೆ.
ಈಗಾಗಲೇ ಕಾರ್ಖಾನೆಗೆ ಸೈಲ್ (SAIL) ಚೇರ್ಮನ್ ಡಾ. ಅಶೋಕ್ ಕುಮಾರ್ ಪಾಂಡ ಅವರು ಭೇಟಿ ನೀಡಿ ಅಧಿಕಾರಿಗಳು ಮತ್ತು ಕಾರ್ಮಿಕ ಸಂಘಗಳೊಂದಿಗೆ ಸಭೆ ನಡೆಸಿದ್ದಾರೆ ಎಂದು ತಿಳಿಸಿದ ಸಚಿವರು, ಕಾರ್ಖಾನೆಯ ಆಧುನೀಕರಣಕ್ಕೆ ಅವಶ್ಯ ವಿರುವ ಬಂಡವಾಳ ತೆಗೆದುಕೊಂಡು ಬರುವುದಾಗಿ ಧೈರ್ಯ ತುಂಬಿದರು.
“ವಿಐಎಸ್‌ಎಲ್ ಕಾರ್ಮಿಕರು ಆತಂಕ ಪಡುವುದು ಬೇಡ. ಕಾರ್ಖಾನೆಯ ಅಭಿವೃದ್ಧಿ ಹಾಗೂ ಆಧುನೀಕರಣಕ್ಕೆ ಜುಲೈ ಅಂತ್ಯದಲ್ಲಿ ಅಗತ್ಯವಿರುವ ಬಂಡವಾಳ ತರಲಾಗುವುದು.”
– ಹೆಚ್.ಡಿ.ಕುಮಾರಸ್ವಾಮಿ, ಕೇಂದ್ರ ಬೃಹತ್ ಕೈಗಾರಿಕಾ ಸಚಿವ.
ಈ ನಿಯೋಗದಲ್ಲಿ ಜೆಡಿಎಸ್ ಮುಖಂಡ ಟಿ.ಚಂದ್ರೇಗೌಡ, ಮಹಿಳಾ ಘಟಕದ ಭಾಗ್ಯಮ್ಮ, ಕಾರ್ಮಿಕ ಸಂಘದ ಅಧ್ಯಕ್ಷ ಅಮೃತ್ ಕುಮಾರ್, ಉಪಾಧ್ಯಕ್ಷ ಮಲ್ಲಿಕಾರ್ಜುನ್ ಹಾಗೂ ಗುತ್ತಿಗೆ ಕಾರ್ಮಿಕರ ಸಂಘದ ರಾಕೇಶ್ ಮತ್ತಿತರರು ಹಾಜರಿದ್ದರು.