ವಿಜಯ ಸಂಘರ್ಷ
ಭದ್ರಾವತಿ : ಕೋವಿಡ್-19 ರ ಪರಿಣಾಮ ಬಾಗಿಲು ಹಾಕಿದ್ದ ಶಾಲಾ ಕಾಲೇಜುಗಳು ಪುನಾರಂಭಗೊಂಡಿದ್ದು, ಶಾಲೆಗಳಲ್ಲಿ ವಿದ್ಯಾರ್ಥಿಗಳ ಕಲರವ ಕೇಳಿ ಬರುತ್ತಿದೆ. ಮತ್ತೊಂದೆಡೆ ಈ ಬಾರಿಯೂ ವಿದ್ಯಾರ್ಥಿ ಗಳಿಗೆ ಬೈಸಿಕಲ್ ವಿತರಣೆ ಮಾಡುವುದು ಬಹುತೇಕ ಅನುಮಾನವೇ..!
ಗ್ರಾಮೀಣ ಭಾಗದ ಹಾಗೂ ವಿದ್ಯಾರ್ಥಿ ಗಳ ಅನುಕೂಲಕ್ಕಾಗಿ ಸರಕಾರ ಪ್ರತಿ ವರ್ಷ ಪ್ರೌಢಶಾಲೆ ವ್ಯಾಪ್ತಿಯ 8ನೇ ತರಗತಿ ವಿದ್ಯಾರ್ಥಿಗಳಿಗೆ ಬೈಸಿಕಲ್ ವಿತರಣೆ ಮಾಡುತ್ತಾ ಬರುತ್ತಿದೆ. ಆದರೆ, ಕಳೆದ 2020-2021ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಕೊರೊನಾದಿಂದ ವಿದ್ಯಾರ್ಥಿಗಳಿಗೆ ಬೈಸಿಕಲ್ ವಿತರಣೆ ಮಾಡಲಾಗಿರಲಿಲ್ಲ. ಇನ್ನು ಈ ಬಾರಿಯ ಸೈಕಲ್‌ಗಾಗಿ ಆಸೆ ಕಣ್ಣುಗಳಿಂದ ನೋಡುತ್ತಿದ್ದ ವಿದ್ಯಾರ್ಥಿಗಳಿಗೆ ನಿರಾಸೆ ಕಾದಿದೆ. ಸೈಕಲ್ ವಿತರಣೆ ಸಂಬಂಧ ರಾಜ್ಯ ಸರಕಾರ ತನ್ನ ನಡೆಯನ್ನು ಸ್ಪಷ್ಟಪಡಿಸಿಲ್ಲ. ಹಾಗಾಗಿ ಈ ಶೈಕ್ಷಣಿಕ ವರ್ಷದಲ್ಲಿಯೂ ವಿದ್ಯಾರ್ಥಿಗಳು ಬೈಸಿಕಲ್ ತುಳಿಯುವುದು ಬಹುತೇಕ ಅನುಮಾನವೇ ಆಗಿದೆ.
ಇನ್ನೂ ಸಿಗದ ಸೈಕಲ್ ಭಾಗ್ಯ !
ಕೊರೊನಾ ನಿಯಂತ್ರಣ ಸಂಬಂಧ ರಾಜ್ಯ ಸರಕಾರ ಕಳೆದ ಒಂದೂವರೆ ವರ್ಷಗಳಿಂದ ಶಾಲಾ ಹಾಗೂ ಕಾಲೇಜುಗಳಿಗೆ ಬಾಗಿಲು ಹಾಕಿತ್ತು. ಆದರೆ, ಸೋಂಕಿನ ಪ್ರಭಾವ ತಗ್ಗಿದ ಪರಿಣಾಮ ರಾಜ್ಯದಲ್ಲಿ ಶಾಲಾ ಆರಂಭದ ಸಂಬಂಧ, ಸರಕಾರ ದಿಟ್ಟ ನಿರ್ಧಾರ ಪ್ರಕಟಿಸಿದ್ದು, ಎರಡು ಹಂತಗಳಲ್ಲಿ ಆರಂಭಕ್ಕೆ ಮುಹೂರ್ತ ಫಿಕ್ಸ್ ಮಾಡಿತ್ತು. ಮೊದಲ ಹಂತವಾಗಿ ಪದವಿ ಪೂರ್ವ ಕಾಲೇಜು ಹಾಗೂ ಎಸ್ಸೆಸ್ಸೆಲ್ಸಿ, ಆನಂತರದಲ್ಲಿ 9ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆ ಆರಂಭ ಮಾಡಿತ್ತು. ಎರಡನೇ ಹಂತದಲ್ಲಿ 6, 7 ಹಾಗೂ 8ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆ ಆರಂಭ ಮಾಡಿದೆ. ಸಾಮಾನ್ಯ ವರ್ಷಗಳಲ್ಲಿ ಶೈಕ್ಷಣಿಕ ವರ್ಷ ಪ್ರಾರಂಭ ವಾಗಿ ತಿಂಗಳು ಕಳೆಯುವುದ ರೊಳಗೆ ಬೈಸಿಕಲ್ ವಿತರಣೆ ಕುರಿತು ಮಾಹಿತಿ ಲಭ್ಯವಾಗುತ್ತಿತ್ತು. ಅಲ್ಲದೆ 8ನೇ ತರಗತಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿತ್ತು. ಇದೀಗ ಶಾಲೆ ಆರಂಭವಾಗಿ ಎರಡು ವಾರಗಳೇ ಕಳೆಯುತ್ತಿದ್ದು, ಈ ತನಕ ಸೈಕಲ್ ವಿತರಣೆ ಮಾಹಿತಿಯೇ ಇಲ್ಲವಾಗಿದೆ.
ಸಮವಸ್ತ್ರವೂ ಇಲ್ಲ:
ಕಳೆದ ವರ್ಷ ಕೊರೊನಾ ನಡುವೆಯೂ ಬೈಸಿಕಲ್ ಹೊರತುಪಡಿಸಿ, ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ಹಾಗೂ ಶಾಲಾ ಸಮವಸ್ತ್ರ ವಿತರಣೆ ಮಾಡಲಾಗಿತ್ತು. ಆದರೆ, ಈ ಬಾರಿ ಪಠ್ಯ ಪುಸ್ತಕ ಮಾತ್ರ ವಿತರಣೆ ಮಾಡಲಾಗಿದೆ. ಶಾಲೆ ಆರಂಭವಾದರೂ, ಈ ತನಕ ಸಮವಸ್ತ್ರ ವಿತರಣೆ ಮಾಡಲಾಗಿಲ್ಲ. ಇದು ಸಹ ವಿದ್ಯಾರ್ಥಿಗಳಿಗೆ ನಿರಾಸೆಯನ್ನುಂಟು ಮಾಡಿದೆ.
ಸೈಕಲ್ ಕನಸು ಕಾಣುತ್ತಿರುವ ವಿದ್ಯಾರ್ಥಿಗಳು ಶೇ.92ರಷ್ಟು ಪಠ್ಯ
ಪುಸ್ತಕ ವಿತರಣೆ: ಪಠ್ಯ ಪುಸ್ತಕ ವಿತರಣೆ ಕಾರ್ಯ ನಡೆಯುತ್ತಿದೆ. ಈ ತನಕ ಶೇ.82 ರಿಂದ 85 ರಷ್ಟು ಪಠ್ಯ ಪುಸ್ತಕ ವಿತರಣೆ ಮಾಡಲಾಗಿದೆ. ಇದರಲ್ಲಿ ಸರಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಉಚಿತವಾಗಿ ಪಠ್ಯ ಪುಸ್ತಕ ವಿತರಣೆ ಮಾಡಿದ್ದರೆ, 1 ರಿಂದ 10ನೇ ತರಗತಿ ತನಕ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಲಾಗಿದೆ. ವಿತರಣೆಯಾದ ಪುಸ್ತಕ ಆನ್‌ಲೈನ್‌ನಲ್ಲಿ ಎಸ್‌ಎಟಿಎಸ್ ತಂತ್ರಾಂಶದ ಮೂಲಕ ಪ್ರತಿಯೊಂದು ಮಾಹಿತಿಯನ್ನು ಅಪ್‌ಲೋಡ್ ಮಾಡಲಾಗಿದೆ. ರಾಜ್ಯದಿಂದ ಪ್ರತಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಪುಸ್ತಕ ಒದಗಿಸಿದ್ದು, ಅವರು ಆಯಾ ಶಾಲೆಗಳಿಗೆ ತಲುಪಿಸುವ ಕೆಲಸ ಮಾಡಿದ್ದಾರೆ.
ಬಿಇಓ ಸ್ಪಷ್ಟನೆ :
ಕೊರೊನಾ ಭೀತಿಯಿಂದ ಮುಚ್ಚ ಲಾಗಿದ್ದ ಶಾಲೆಗಳು ಕಳೆದ ಕೆಲ ದಿನಗಳಿಂದಪುನರಾರಂಭಗೊಂಡಿವೆ. ವಿದ್ಯಾರ್ಥಿಗಳು ಉತ್ಸಾಹದಿಂದ ಶಾಲೆಗಳತ್ತ ಮುಖಮಾಡಿದ್ದಾರೆ. ಆದರೆ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸರ್ಕಾರ ಸೈಕಲ್ ವಿತರಣೆ ಮಾಡುವ ಬಗ್ಗೆ ಈವರೆಗೆ ಯಾವುದೇ ನಿರ್ಧಾರ ಪ್ರಕಟವಾಗಿಲ್ಲ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಟಿ. ಸೋಮಶೇಖರ್ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.
ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795