ವಿಜಯ ಸಂಘರ್ಷ
ಭದ್ರಾವತಿ: ಶಿಕ್ಷಕಿ ವೃತ್ತಿಯ ಜೊತೆಗೆ, ಸಮಾಜ ಸೇವೆಯನ್ನು ಮಾಡಬಹುದು ಎಂಬುದನ್ನು ಶಿಕ್ಷಕಿ ಅನಿತಾಮೇರಿ ಕಾರ್ಯಗತವಾಗಿ ರೂಪಿಸಿ ಯಶಸ್ಸು ಸಾಧಿಸಿದ್ದಾರೆ ಎಂದು ಶಿವಮೊಗ್ಗ ಉಪನಿರ್ದೇಶಕ ಎನ್.ಎಂ.ರಮೇಶ್ ಹೇಳಿದರು.
ನಗರದ ತರೀಕೆರೆ ರಸ್ತೆಯ ನಯನ ಸಭಾಂಗಣದಲ್ಲಿ "ತಾಯಿ ಮಡಿಲು ಸೇವಾಸಂಸ್ಥೆ" ವತಿಯಿಂದ ಏರ್ಪಡಿಸಿದ್ದ ಗುರುವಂದ ನಾ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಡಾ.ಎಸ್.ರಾಧಾ ಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ನಂತರ ಉದ್ಘಾಟಿಸಿ ಮಾತನಾಡಿದರು.
ಹಲವಾರು ವರ್ಷಗಳಿಂದ ಬಡ, ಮಧ್ಯಮ ವರ್ಗಗಳಲ್ಲಿನ ಮಕ್ಕಳ ಸಮಸ್ಯೆಗಳಿಗೆ ಕೆಲಸದ ಒತ್ತಡದ ನಡುವೆಯೂ ಸ್ಪಂದಿಸುವ ಮೂಲಕ ಜೀವ ಉಳಿಸಿದ್ದಾರೆ. ದೇವರು ಅವರಿಗೆ ಇನ್ನು ಸೇವೆ ಮಾಡುವ ಶಕ್ತಿ ನೀಡಲಿ ಎಂದು ತಿಳಿಸಿ, ಅನಿತ ಮೇರಿ ಶಿಕ್ಷಕ ಸಮುದಾಯಕ್ಕೆ ಮಾದರಿ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ತಾಯಿ ಮಡಿಲು ಸೇವಾ ಸಂಸ್ಥೆಯ ಸಂಸ್ಥಾಪಕಿ ಅನಿತ ಮೇರಿ ಮಾತನಾಡಿ, ಹೃದಯ ಸಂಬಂಧ, ರಕ್ತದ ಕೊರತೆ ಮತ್ತಿತರೆ ಸಮಸ್ಯೆಗಳಿಂದ ಬಳಲುತ್ತಿದ್ದ ಸುಮಾರು 415 ಮಕ್ಕಳಿಗೆ ಈವರೆಗೆ ದಾನಿಗಳ ಸಹಾಯ ಹಾಗೂ ವೈಯಕ್ತಿಕ ವೆಚ್ಚದಲ್ಲಿ ಚಿಕಿತ್ಸೆ ಕೊಡಿಸಿರುವ ತೃಪ್ತಿ ತಮಗೆ ಇದೆ. ಇಂತಹ ಸೇವೆ ಮಾಡಲು ಡಿಡಿಪಿಐ ಎನ್.ಎಂ.ರಮೇಶ್, ಬಿಇಓ ಸೋಮಶೇಖರಯ್ಯ ರವರ ಬಳಿ ಅನುಮತಿ ಕೋರಿದಾಗ ನೀಡಿದ್ದಾರೆ. ತಮ್ಮ ಸೇವೆಗೆ ಅಧಿಕಾರಿವರ್ಗದವರು, ಶಿಕ್ಷಕ ಸಂಘದ ಪಧಾಧಿಕಾರಿಗಳು , ಶಿಕ್ಷಕರು ಪ್ರೋತ್ಸಾಹಿಸಿ, ಬೆಂಬಲಿಸಿದ್ದಾರೆ ಎಂದು ಸ್ಮರಿಸಿದರು. ಮುಂದಿನ ದಿನಗಳಲ್ಲಿ ಸಂಸ್ಥೆ ವತಿಯಿಂದ ಮತ್ತಷ್ಟು ಹೆಚ್ಚಿನ ಸೇವೆ ಮಾಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಎಚ್.ಎಲ್. ಷಡಕ್ಷರಿ, ತಾಲೂಕು ಅಧ್ಯಕ್ಷ ಸಿದ್ಧಬಸಪ್ಪ ಮುಂತಾದವರು ಜಿಲ್ಲೆಯ ವಿಶೇಷ ಸಾಧಕ ಶಿಕ್ಷಕರಾದ ಅರಳೆಹಳ್ಳಿ ಅಣ್ಣಪ್ಪ, ಮೇರಿ ಡಿಸೋಜ, ಅಪೇಕ್ಷಾ ಮಂಜುನಾಥ್, ಅನಿತಕೃಷ್ಣ, ಸುಶೀಲಾ ಮಾರ್ಗರೇಟ್, ರೇಣುಕಾರಾಧ್ಯ, ಶೋಭಾಸತೀಶ್ ಇವರಿಗೆ "ಶಿಕ್ಷಕ ಸೇವಾ ರತ್ನ"ಪ್ರಶಸ್ತಿ ನೀಡಿ ಸನ್ಮಾನಿಸಿ ಶುಭಕೋರಿದರು.
ಡಿವೈಪಿಸಿ ಗಣಪತಿ , ಉಮಾ ಮಹೇಶ್, ಪರಶುರಾಮ್ ಮುಂತಾದವರು ಭಾಗವಹಿಸಿದ್ದರು.
ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795