ವಿಜಯ ಸಂಘರ್ಷ
ಕ್ರಾಂತಿಕಾರಿ ಗಾಯಕ ಗದ್ದರ್ ಭಾನುವಾರ ನಿಧನರಾಗಿದ್ದಾರೆ. ಅನಾರೋಗ್ಯದ ಕಾರಣದಿಂದ ತೆಲಂಗಾಣ ಅಪೋಲೋ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಗುಮ್ಮಡಿ ವಿಠ್ಠಲ ರಾವ್ ಅವರ ನಿಜವಾದ ಹೆಸರಿಗಿಂತ ಹೆಚ್ಚಾಗಿ ಗದ್ದರ್ ಎಂಬ ಹೆಸರಿನಿಂದ ಜನಪ್ರಿಯರಾಗಿದ್ದರು. 1949 ರಲ್ಲಿ ಜನಸಿದ್ದ ಅವರು ಕ್ರಾಂತಿಗೀತೆ, ಲಾವಣಿ, ಜನಪದ ಗೀತೆಗಳ ಮೂಲಕ ಹೆಸರುವಾಸಿಯಾಗಿದ್ದರು. ಜನ ನಾಟ್ಯ ಮಂಡಳಿಯ ಸ್ಥಾಪಕರಾಗಿದ್ದರು.
ತೆಲಂಗಾಣ ಚಳವಳಿಯ ಪುನರುತ್ಥಾನ ದೊಂದಿಗೆ, ಗದ್ದರ್ ಪ್ರತ್ಯೇಕ ತೆಲಂಗಾಣ ರಾಜ್ಯದ ಉದ್ದೇಶವನ್ನು ಬೆಂಬಲಿಸಿದರು. ಅವರು 2010 ರಲ್ಲಿ ಮಾವೋವಾದಿ ಚಳುವಳಿಯನ್ನು ತೊರೆದು ತೆಲಂಗಾಣ ಚಳವಳಿಗೆ ಸೇರ್ಪಡೆಗೊಂಡರು.
ತೆಲಂಗಾಣದಲ್ಲಿ ಹಿಂದುಳಿದ ಜಾತಿಗಳು ಮತ್ತು ದಲಿತರ ಹಕ್ಕುಗಳಿಗಾಗಿ ಗದ್ದರ್ ಹೋರಾಟ ಮಾಡಿದ್ದರು. ತಮ್ಮ ಹಾಡುಗಳ ಮೂಲಕವೇ ಅಪಾರ ಅಭಿಮಾನಿಗಳನ್ನು ಪಡೆದು, ಹೆಚ್ಚಿನ ಜನಮನ್ನಣೆ ಗಳಿಸಿದ್ದರು. 2017 ರಲ್ಲಿ, ಮಾವೋವಾದಿಗಳೊಂದಿಗಿನ ಸಂಬಂಧವನ್ನು ಕಡಿದುಕೊಂಡರು, ಅಲ್ಲಿಯವರೆಗೆ ಮತದಾನ ವ್ಯರ್ಥ ಎಂದು ನಂಬಿದ್ದ ಗದ್ದರ್ 2018 ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಜೀವನದಲ್ಲಿ ಮೊದಲ ಬಾರಿಗೆ ಮತ ಚಲಾಯಿಸಿದರು. ಕಳೆದ ತಿಂಗಳು, ಅವರು ಗದ್ದರ್ ಪ್ರಜಾ ಪಕ್ಷ ಎಂದು ಕರೆಯಲ್ಪಡುವ ಹೊಸ ರಾಜಕೀಯ ಪಕ್ಷವನ್ನು ಪ್ರಾರಂಭಿಸುವುದಾಗಿ ಘೋಷಿಸಿದರು.
ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದರು. *ಬಸವಶ್ರೀ ಪ್ರದಾನ:* ಚಿತ್ರದುರ್ಗ ಬೃಹನ್ಮಠ ಪ್ರತಿ ವರ್ಷ ನೀಡುತ್ತಿರುವ ಪ್ರತಿಷ್ಠಿತ ಬಸವಶ್ರೀ ಪ್ರಶಸ್ತಿಯನ್ನು 2003 ರಲ್ಲಿ ಆಂಧ್ರ ಪ್ರದೇಶದ ಕ್ರಾಂತಿಕಾರಿ ಕವಿ ಗದ್ದರ್ ನೀಡಲಾಯಿತ್ತು. ಜನ ನಾಟ್ಯ ಮಂಡಳಿಯ ಧುರೀಣ. ಹಾಗೂ ಅಖಿಲ ಭಾರತ ಕ್ರಾಂತಿಕಾರಿ ಸಂಸ್ಕೃತಿ ಒಕ್ಕೂಟ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಗದ್ದರ್ ಅವರನ್ನು ಬಸವಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿರುವುದಾಗಿ ಚಿತ್ರದುರ್ಗ ಬೃಹನ್ಮಠದ ಶ್ರೀ ಶಿವಮೂರ್ತಿ ಮುರುಘರಾಜೇಂದ್ರ ಶರಣರು ತಿಳಿಸಿದಾಗ ಬಹಳಷ್ಟು ವಿರೋಧ ವ್ಯಕ್ತ ಪಡಿಸಿದ್ದರು ಮೂಲಭೂತವಾದಿಗಳು. ಕವಿ ಗದ್ದರ್ ಶೋಷಣೆಯ ವಿರುದ್ಧ ಬಸವಣ್ಣನವರು ಮಾಡಿದ ಕ್ರಾಂತಿಯನ್ನು ಗೌರವಿಸುತ್ತಾರೆ. 12ನೇ ಶತಮಾನದ ಶರಣ ಪಡೆಯ ಮಾದರಿಯಲ್ಲಿಯೇ ಸೈನ್ಯವನ್ನು ಕಟ್ಟುವ ಕನಸು ಹೊಂದಿದ್ದು, ಈಗಾಗಲೇ ಜನನಾಟ್ಯ ಮಂಡಳಿ ಹಾಗೂ ಅಖಿಲ ಭಾರತ ಕ್ರಾಂತಿ ಸಂಸ್ಕೃತಿ ಒಕ್ಕೂಟ ಸಂಸ್ಥೆಗಳನ್ನು ಕ್ರಿಯಾಶೀಲಗೊಳಿಸಿದ್ದಾರೆ.
ಬಂದೂಕಿನ ನಳಿಕೆಗೆ ಎದೆಯಾಡ್ಡಿ ಸಾಯುವ ನಕ್ಸಲೀಯರ ತ್ಯಾಗದ ಮುಂದೆ ತನ್ನ ಸಾಧನೆ ಎನೇನೂ ಅಲ್ಲ ಎನ್ನುವ ಗದ್ದರ್ ಆಂಧ್ರದ ಮಡಕ್ ಜಿಲ್ಲೆಯ ದಲಿತ ಕುಟುಂಬವೊಂದ ರಲ್ಲಿ ಹುಟ್ಟಿದವರು. ಕ್ರಾಂತಿಕಾರಿ ಕವಿಗಳ ಸಂಘಟನೆಯಾದ ಆರ್ಟ್ ಲವರ್ಸ್ ಅಸೋಸಿಯೇಷನ್‌ನ ಸದಸ್ಯರಾಗಿ, ಜನ ಜಾಗೃತಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿ ಕೊಂಡವರು ಗದ್ದರ್ ನಿಧನಕ್ಕೆ ಹಲವು ಸಂಘಟನೆಗಳು, ಸಾಹಿತಿಗಳು ಸಂತಾಪ ಸೂಚಿಸಿದ್ದಾರೆ.
Tags:
ಗದ್ದರ್