ವಿಜಯ ಸಂಘರ್ಷ
ಭದ್ರಾವತಿ: ಲಯನ್ಸ್ ಒಂದು ಸೇವಾಧಾರಿತ ಸಂಸ್ಥೆ, ತಮ್ಮ ಕಾರ್ಯದ ಒತ್ತಡದ ನಡುವೆಯೂ ಕೂಡ ಸಂಸ್ಥೆಯು ನೂರಾರು ಸೇವಾ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ. ಸ್ವಾಮಿ ವಿವೇಕಾನಂದ ಜಯಂತಿ ಯನ್ನು ರಕ್ತದಾನ ಹಾಗೂ ಆರೋಗ್ಯ ಶಿಬಿರಗಳ ಮೂಲಕ ನಡೆಸುತ್ತಿರುವುದು ಅತ್ಯುತ್ತಮ ಕಾರ್ಯಕ್ರಮ ಎಂದು ವಿಶ್ವೇಶ್ವರಾಯ ವಿದ್ಯಾ ಸಂಸ್ಥೆಯ ಅಧ್ಯಕ್ಷ ಬಿ.ಸಿದ್ದಬಸಪ್ಪ ಹೇಳಿದರು.
ಸರ್ಕಾರಿ ನೌಕರರ ಸಂಘ, ವಿಶ್ವೇಶ್ವರಾಯ ವಿದ್ಯಾ ಸಂಸ್ಥೆ, ಮಲ್ನಾಡ್ ಕಾನ್ಸರ್ ಆಸ್ಪತ್ರೆ, ಮೀನಾ ನರ್ಸಿಂಗ್ ಹೋಂ, ಲಯನ್ಸ್ ರಕ್ತ ನಿಧಿ ಇವರ ಸಹಯೋಗದಲ್ಲಿ, ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ರಾಷ್ಟ್ರೀಯ ಯುವದಿನ, ಉಚಿತ ವೈದ್ಯಕೀಯ ತಪಾಸಣಾ ಶಿಬಿರ, ಕ್ಯಾನ್ಸರ್ ಜಾಗೃತಿ ಉಪನ್ಯಾಸ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಾಗತಿಕ ಆದರ್ಶ ರೂಪಿ, ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರಿಗೆ ನಾವು ಸಲ್ಲಿಸುತ್ತಿರುವ ನಮನ ಎಂದು ತಿಳಿಸಲು ಹೆಮ್ಮೆ ಪಡುತ್ತೇವೆ. ಎಲ್ಲಾ ಸ್ವಯಂ ಸೇವಾ ಸಂಸ್ಥೆಗಳು ಲಯನ್ಸ್ ಕ್ಲಬ್ ನಂತೆ ಜನೋಪಯೋಗಿ ಸೇವೆ ಸಲ್ಲಿಸುತ್ತಾ ಹೋದರೆ ಭಾರತವು ಆರೋಗ್ಯಪೂರ್ಣ ಪ್ರಬಲ ರಾಷ್ಟ್ರವಾಗುವುದರಲ್ಲಿ ಸಂಶಯವಿಲ್ಲ. ಆರೋಗ್ಯವೇ ಮಹಾಭಾಗ್ಯ, ರಕ್ತದಾನ ಮಹಾದಾನ ಎಂದು ಲಯನ್ಸ್ ಕ್ಲಬ್ ಸೇವೆಯನ್ನು ಶ್ಲಾಘಿಸಿದರು.
ಮಾಜಿ ಜಿಲ್ಲಾ ಗವರ್ನರ್ ದಿವಾಕರ್ ಶೆಟ್ಟಿ ಮಾತನಾಡಿ, ರಾಷ್ಟ್ರೀಯ ಯುವದಿನವನ್ನು ರಕ್ತದಾನ ಶಿಬಿರದ ಮೂಲಕ ಆಚರಿಸುತ್ತಿರುವುದು ಸಂತಸದ ವಿಷಯ ಎಂದರು.
ವಿದ್ಯಾ ಸಂಸ್ಥೆಯ ಸಂಸ್ಥಾಪಕ ಬಿ.ಎಲ್.ರಂಗಸ್ವಾಮಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಮಲ್ನಾಡ್ ಕ್ಯಾನ್ಸರ್ ಆಸ್ಪತ್ರೆಯ ವೈದ್ಯರಾದ ಮೊಹಮ್ಮದ್ ಇಸ್ಮಾಯಿಲ್ ಶರೀಫ್ ಹಾಗೂ ಭರತ್ ಇವರು ಕ್ಯಾನ್ಸರ್ ತಡೆಗಟ್ಟುವ ಮಾರ್ಗೋಪಾಯಗಳು ಹಾಗೂ ಜೀವನ ಶೈಲಿಯ ಬಗ್ಗೆ ಪಿಪಿಟಿ ಮೂಲಕ ಜಾಗೃತಿ ಮೂಡಿಸಿದರು. ರಕ್ತನಿಧಿ ಅಧ್ಯಕ್ಷ ಮೌನೇಶ್, ರವಿಚಂದ್ರ ಶಿಭಿರವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ಮೀನಾ ನರ್ಸಿಂಗ್ ಹೋಂನ ವೈದ್ಯರಾದ ಡಾ.ವರ್ಷಾ ಹಾಗೂ ಹಿತೇಶ್ ಇವರು ಉಚಿತ ವೈದ್ಯಕೀಯ ತಪಾಸಣಾ ಶಿಭಿರವನ್ನು ನಡೆಸಿಕೊಟ್ಟರು.
ಪ್ರಾಂತೀಯ ಅಧ್ಯಕ್ಷ ಲ.ದೇವರಾಜ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಆಶಾ ಸ್ವಾಗತಿಸಿ, ಕಾರ್ಯದರ್ಶಿ ದಿವಾಕರ್ ಎಂ. ಕಾರ್ಯಕ್ರಮ ನಿರೂಪಿಸಿ, ಲಯನ್ ರಾಜೇಶ್ ಬಿ.ಎಸ್. ವಂದಿಸಿದರು.
ಶ್ರೀನಿವಾಸ್, ಮೋಹನ್ ಎಸ್.ಕೆ. ಶ್ರೀನಿವಾಸ್, ನಾಗರಾಜ್, ಅಶೋಕ್, ರಾಜ್ ಕುಮಾರ್ ಉಪಸ್ಥಿತರಿದ್ದರು.