ಅಂಗನವಾಡಿಯಲ್ಲಿ ಮಕ್ಕಳಿಗೆ ನೀಡುವ ಪೌಷ್ಟಿಕ ಆಹಾರ ಸ್ಥಗಿತ: ಜಯ ಕರ್ನಾಟಕ ಜನಪರ ವೇದಿಕೆ ಆಕ್ರೋಶ

ವಿಜಯ ಸಂಘರ್ಷ
ಶಿಕಾರಿಪುರ: ಅಂಗನವಾಡಿಯಲ್ಲಿ ಮಕ್ಕಳಿಗೆ ನೀಡುವ ಪೌಷ್ಟಿಕ ಆಹಾರ ಹಾಲು ಹಾಗೂ ಹಾಲು ಪುಡಿಯನ್ನು ಉದ್ದೇಶಪೂರ್ವಕವಾಗಿ ಜಿಲ್ಲೆಯ ಶಿಕಾರಿಪುರ,ಭದ್ರಾವತಿ, ಸೊರಬ ತಾಲೂಕಿನಲ್ಲಿ ಸರ್ಕಾರ ಸ್ಥಗಿತಗೊಳಿಸಿರು ವುದು ಖಂಡನೀಯ ಜಯ ಕರ್ನಾಟಕ ಜನಪರ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುಲಿಗಿ ಕೃಷ್ಣ ಕಿಡಿಕಾರಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಡವರ ಮಕ್ಕಳ ಪೌಷ್ಟಿಕ ಹಾಲಿನ ಕ್ಷೀರಭಾಗ್ಯ ಕಳೆದ ಆರು ತಿಂಗಳಿನಿಂದ ಹಾಲು ಪುಡಿ ಸರಬರಾಜು ಆಗದೆ ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚಾಗುತ್ತಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಮ್ಮ ರಾಜಕೀಯದಲ್ಲಿ ಬ್ಯುಸಿ ಆಗಿದ್ದು ಗರ್ಭಿಣಿ ಯರಿಗೆ ಮತ್ತು ಮಕ್ಕಳಿಗೆ ಅಂಗನವಾಡಿ ಯಿಂದ ಸರಬರಾಜು ಮಾಡುತ್ತಿದ್ದ ಹಾಲಿನ ಪುಡಿಯ ಬಗ್ಗೆ ನಿರ್ಲಕ್ಷ ತೋರಿದ್ದಾರೆಂದು ಆರೋಪಿಸಿದರು.

ಅಂಗನವಾಡಿಯ ಸಮಸ್ಯೆಗಳ ಕುರಿತು ತಾಲೂಕು ಸಿಡಿಪಿಓ ನಂದಕುಮಾರ್ ರವರಲ್ಲಿ ವಿಚಾರಿಸಿದರೆ, ಸರ್ಕಾರದಲ್ಲಿ ಬಜೆಟ್ ಕೊರತೆಯಿಂದಾಗಿ, ಕೆಎಂಎಫ್ ಇಲಾಖೆಗೆ 92 ಲಕ್ಷ ಹಣ ಬಾಕಿ ಇರುವುದರಿಂದ ಕೆಎಂಎಫ್ ರವರು ಹಾಲಿನ ಪುಡಿ ಸರಬರಾಜು ಮಾಡಿಲ್ಲ ಬಜೆಟ್ ನಲ್ಲಿ ಹಣ ಬಂದ ಕೂಡಲೇ ಕೊರತೆ ನೀಗುತ್ತದೆ ಎಂಬ ಉತ್ತರ ಬಂದಿದೆ. ಜಿಲ್ಲೆಯ ಡೆಪ್ಯೂಟಿ ಡೈರೆಕ್ಟರ್ ಕೃಷ್ಣಪ್ಪರವರು 2018 ರಿಂದ ಕೆಎಂಎಫ್ ಇಲಾಖೆಗೆ ಸರ್ಕಾರದಿಂದ ಒಂದುವರೆ ಕೋಟಿ ಹಣ ಬಾಕಿ ಇರುವುದ ರಿಂದ ಹಾಲಿನ ಪುಡಿ ಸರಬರಾಜು ಆಗಿಲ್ಲ ಈ ಬಜೆಟ್ ನಲ್ಲಿ ಹಣ ಬರಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಜಾರಿಗೊಳಿಸಿರುವ ಉಚಿತ ಯೋಜನೆಗಳ ಜಾಹೀರಾತುಗಳಿಗೆ ಕೋಟ್ಯಾಂತರ ಹಣ ಖರ್ಚು ಮಾಡುತ್ತದೆ. ಆದರೆ ಬಡವರ ಪಾಲಿನ ಕ್ಷೀರದಾರೆಯಾದ ಹಾಲು ಸರಬರಾಜನ್ನು ಕಿತ್ತು ಕೊಂಡಿರುವುದು ದುರಂತ. ರಾಜ್ಯ ಸರ್ಕಾರ ಬಡವರಿಗಾಗಿ 5 ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿರುವುದನ್ನು ನಾವು ಸ್ವಾಗತಿಸುತ್ತೇವೆ. ಆದರೆ ಬಡವರು, ಮಧ್ಯಮ ವರ್ಗದವರು, ಕೂಲಿ ಕಾರ್ಮಿಕರ ಮಕ್ಕಳು ಅಂಗನವಾಡಿ ಶಾಲೆಗಳಿಗೆ, ಸರ್ಕಾರಿ ಶಾಲೆಗಳಿಗೆ ಅವಲಂಬಿತ ರಾಗಿರುತ್ತಾರೆ. ಸರ್ಕಾರ ಕೂಡಲೇ ತಾರತಮ್ಯ ಮಾಡದೆ ಸಂಬಂಧಿಸಿದ ಕೆಎಂಎಫ್ ಇಲಾಖೆಗೆ ಹಣ ಬಿಡುಗಡೆಗೊಳಿಸಿ ಹಾಲು ಪುಡಿ ಸರಬರಾಜು ಮಾಡಬೇಕೆಂದು ಸಂಘಟನೆ ಒತ್ತಾಯಿಸುತ್ತದೆ ಎಂದರು.

ಮಾಜಿ ಮುಖ್ಯಮಂತ್ರಿಗ ಬಿ.ಎಸ್. ಯಡಿಯೂರಪ್ಪ ಹಾಗೂ ಬಂಗಾರಪ್ಪ ರವರ ಕ್ಷೇತ್ರಗಳಲ್ಲಿ ಬಿ ಎಸ್ ಯಡಿಯೂರಪ್ಪರವರ ಪುತ್ರ ಶಿಕಾರಿಪುರದ ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ರವರ ಪುತ್ರ ಮಧು ಬಂಗಾರಪ್ಪ ಸೊರಬ ಕ್ಷೇತ್ರದ ಶಾಸಕರಾಗಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ಇವರ್ಯಾರಿಗೂ ಬಡವರ ಮಕ್ಕಳ ಬಗ್ಗೆ ಕಾಳಜಿ ಇಲ್ಲ, ಈ ವಿಚಾರವಾಗಿ ಆಸಕ್ತಿ ಇಲ್ಲದಂತಾಗಿದ್ದಾರೆ. ಭದ್ರಾವತಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಬಿ.ಕೆ.ಸಂಗಮೇಶ್ವರ ಅಧಿಕಾರದಲ್ಲಿದ್ದಾರೆ. ಇವರ ಕ್ಷೇತ್ರಗಳಲ್ಲಿಯೇ ಹಾಲು ಪುಡಿ ಸರಬರಾಜಾಗಾದಿರುವುದು ಗಮನಕ್ಕೆ ಬಂದಂತ್ತಿಲ್ಲ. ಸಂಸದ ಬಿ.ವೈ. ರಾಘವೇಂದ್ರ ಶಿಕಾರಿಪುರ ಕ್ಷೇತ್ರದವರಾಗಿ ದ್ದಾರೆ. ಬಡವರ ಮಕ್ಕಳಿಗೆ ಅನ್ಯಾಯ ವಾಗುತ್ತಿದ್ದು ಈ ಬಗ್ಗೆ ಚಕಾರವೆತ್ತದ ಜನಪ್ರತಿನಿಧಿಗಳ ಬೇಜವಾಬ್ದಾರಿಗೆ ತಾಲೂಕಿನ ಗರ್ಭಿಣಿಯರು, ಅಂಗನವಾಡಿ ಮಕ್ಕಳು ಹಿಡಿ ಶಾಪ ಹಾಕುತ್ತಿದ್ದಾರೆ ಎಂದರು.

ತಾಲೂಕು ಅಧ್ಯಕ್ಷ ಶಿವಯ್ಯ ಎನ್ ಶಾಸ್ತ್ರಿ ಮಾತನಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೂಡಲೇ ಇದರ ಬಗ್ಗೆ ಕ್ರಮ ಜರುಗಿಸಿ ಮಕ್ಕಳಿಗೆ ಅಪೌಷ್ಟಿಕತೆಗೆ ದಾರಿ ಮಾಡದೆ ಕೂಡಲೆ ಕ್ರಮ ವಹಿಸಬೇಕು ಇಲ್ಲದಿದ್ದರೆ ತಾಲೂಕು ಕಚೇರಿಯ ಮುಂದೆ ಮುಂದಿನ ದಿನಗಳಲ್ಲಿ ಸಂಘಟನೆ ವತಿಯಿಂದ ಧರಣಿ ಕೂರಲಾಗುತ್ತದೆ ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಹುಲ್ಮಾರ್ ಸಣ್ಣಪ್ಪ, ನಗರ ಅಧ್ಯಕ್ಷ ಮುಕ್ರಂ, ಯಮುನಪ್ಪ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು