ವಿಜಯ ಸಂಘರ್ಷ ನ್ಯೂಸ್
ಸಾಗರ: ನಗರದ ಶಿವಪ್ಪನಾಯಕ ನಗರದ ಆಶ್ರಮ ಶಾಲೆ ಹಿಂಭಾಗದಲ್ಲಿ ಮೇ: 27ರಂದು ದನ ಕಳ್ಳತನ ಮಾಡಿದ ಬಗ್ಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ನಗರದ ಇಬ್ಬರು ಆರೋಪಿಗಳನ್ನು ಬಂಧಿಸಿ, 10 ಲಕ್ಷ ಮೌಲ್ಯದ ಫಾರ್ಚೂನರ್ ಕಾರನ್ನು ಟೌನ್ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೇ ತಿಂಗಳಲ್ಲಿ ನಡೆದಿದ್ದ ದನ ಕಳವು ಪ್ರಕರಣದ ಬೆನ್ನು ಹತ್ತಿದ್ದ ಪೊಲೀಸರು, ಸಿಸಿ ಟಿವಿ ದೃಶ್ಯಾವಳಿ ಆಧರಿಸಿ 6 ತಿಂಗಳ ಬಳಿಕ ಶಿವಮೊಗ್ಗ ನಗರದ ಬೈಪಾಸ್ ಬಳಿಯ ಮೆಹಬೂಬ್ ನಗರದ ಗುಜರಿ ವ್ಯಾಪಾರಿ ಮೊಹಮ್ಮದ್ ಸಲ್ಮಾನ್ (19) ಹಾಗೂ ವಾದಿಹುದಾ 2ನೇ ತಿರುವಿನ ನಿವಾಸಿ ಸ್ಟಿಕ್ಕರ್ ಕಟಿಂಗ್ ಮಾಡುತ್ತಿದ್ದ ಮೊಹಮ್ಮದ್ ಮುಶೀರ್(25)ನನ್ನು ವಶಕ್ಕೆ ಪಡೆಯಲಾಗಿದೆ.
ಕಳವು ಮಾಡಲು ಉಪಯೋಗಿಸುತ್ತಿದ್ದ ಟೊಯೋಟಾ ಫಾರ್ಚೂನರ್ ಕಾರನ್ನು ಜಪ್ತಿ ಮಾಡಲಾಗಿದೆ.
ಈ ಆರೋಪಿಗಳು ತಮಗೆ ಹಣದ ಅಗತ್ಯ ವಿದ್ದಾಗ ಫಾರ್ಚೂನರ್ ಕಾರಿನಲ್ಲಿ ಬಂದು, ನಿರ್ಜನ ಪ್ರದೇಶದಲ್ಲಿ ಒಂಟಿಯಾಗಿ ತಿರುಗಾಡುತ್ತಿದ್ದ ದನವನ್ನು ಕದ್ದೊಯ್ದು ಮಾರಾಟ ಮಾಡುತ್ತಿದ್ದರು. ಈಗಾಗಲೇ ಇವರ ವಿರುದ್ಧ ಶಿವಮೊಗ್ಗದ ದೊಡ್ಡಪೇಟೆ, ಸೊರಬ, ಕುಂಸಿ ಠಾಣೆಯಲ್ಲೂ ಪ್ರಕರಣ ದಾಖಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪೊಲೀಸ್ ಉಪಾಧೀಕ್ಷಕ ಗೋಪಾಲಕೃಷ್ಣ ಟಿ. ನಾಯಕ್‌ರವರ ಮಾರ್ಗದರ್ಶನದಲ್ಲಿ ಕಾರ್ಗಲ್ ವೃತ್ತದ ಇನ್‌ಸ್ಪೆಕ್ಟರ್ ಸಂತೋಷ್ ಶೆಟ್ಟಿ ನೇತೃತ್ವದಲ್ಲಿ ಸಿಬ್ಬಂದಿಗಳಾದ ಯಲ್ಲಪ್ಪ ಟಿ.ಹಿರೇಗಣ್ಣನ್ನವರ್, ಟಿ.ಎಂ.ನಾಗರಾಜ, ಪೇಟೆ ಠಾಣೆ ಅಪರಾಧ ವಿಭಾಗದ ಸಿಬ್ಬಂದಿಗಳಾದ ಸನಾವುಲ್ಲಾ, ಶೇಕ್ ಫೈರೋಜ್, ವಿಕಾಸ್, ರವಿಕುಮಾರ್, ಕೃಷ್ಣಮೂರ್ತಿ, ವಿಶ್ವನಾಥರವರನ್ನೊಳಗೊಂಡ ತಂಡ ಆರೋಪಿ ಪತ್ತೆಯಲ್ಲಿದ್ದರು.
Tags:
ಸಾಗರ ಕ್ರೈಮ್ ನ್ಯೂಸ್