ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ತಾಲ್ಲೂಕಿನ ಗ್ರಾಮಾಂತರ ಭಾಗದಲ್ಲಿರುವ ನ್ಯಾಯಬೆಲೆ ಅಂಗಡಿಗಳು ನಿಗದಿತ ಸಮಯಕ್ಕೆ ಬಾಗಿಲು ತೆಗೆಯದೆ ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿದ್ದು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಕರುನಾಡ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್ ರವರಿಗೆ ಮನವಿ ಸಲ್ಲಿಸಲಾಯಿತು.
ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಎಸ್ ಗೌಡ ಮಾತನಾಡಿ, ತಾಲೂಕಿನ ಗ್ರಾಮಾಂತರ ಭಾಗದ ನ್ಯಾಯ ಬೆಲೆ ಅಂಗಡಿಗಳು ಸರ್ಕಾರದ ಆದೇಶ ಪಾಲಿಸದೆ ಧಿಕ್ಕರಿಸುತ್ತಿದ್ದಾರೆ. ಅಂಗಡಿಗಳು ತಿಂಗಳು ಪೂರ್ತಿ ಬಾಗಿಲು ತೆರೆಯಬೇಕೆಂಬ ಆದೇಶ ವಿದ್ದರೂ ತಿಂಗಳಲ್ಲಿ ಎರಡು- ಮೂರು ದಿನ ಬಾಗಿಲು ತೆಗೆಯುತ್ತಿದ್ದು ಪಡಿತರ ದಾರರಿಗೆ ತೊಂದರೆನೀಡುತ್ತಿದ್ದಾರೆಂದು ಆರೋಪಿಸಿದರು.
ಗ್ರಾಮಾಂತರ ಭಾಗದ ಸಾರ್ವಜನಿಕ ರಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ, ಈ ಕೂಡಲೇ ತಹಸೀಲ್ದಾರ್ ನೇತೃತ್ವದಲ್ಲಿ ಎಲ್ಲಾ ನ್ಯಾಯಬೆಲೆ ಅಂಗಡಿ ಮಾಲೀಕರ ಸಭೆ ಕರೆದು ಸರ್ಕಾರದ ಆದೇಶವನ್ನು ಪಾಲನೆ ಮಾಡುವಂತೆ ಸೂಚಿಸಿ ಸೂಕ್ತ ಕ್ರಮ ತೆಗೆದುಕೊಳ್ಳ ಬೇಕೆಂದು ಒತ್ತಾಯಿಸಿದರು.
ಕರುನಾಡ ಹಿತರಕ್ಷಣಾ ಸಮಿತಿಯ ರಾಜ್ಯಾಧ್ಯಕ್ಷ ವೈ.ಶಶಿಕುಮಾರ್ ಮಾತನಾಡಿ, ಕೂಡಲೇ ವ್ಯವಸ್ಥೆ ಸರಿಪಡಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಗ್ರಾಮಾಂತರ ಪಡಿತರ ಇಲಾಖೆ ಕಚೇರಿ ಮುಂಭಾಗ ಶಾಂತಿಯುತ ಧರಣಿ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ ನೀಡಿದರು.
Tags:
ಭದ್ರಾವತಿ ಪ್ರತಿಭಟನೆ ವರದಿ