ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ : ನಾವು ಆಡುವ ಮಾತು ಗಳಿಗೆ ಕೊಲ್ಲುವ ಮತ್ತು ಕಾಪಾಡುವ ಸಾಮರ್ಥ್ಯ ಎರಡೂ ಇದೆ. ಮಾತು ಗಳಲ್ಲಿ ಕರುಣೆ ಹಾಗೂ ನೈಜತೆಯಿದ್ದರೆ ಬದುಕು ಬಲಗೊಳ್ಳುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
ಜಗದ್ಗುರುಗಳು ನಗರದ ಸಹ್ಯಾದ್ರಿ ಬಡಾವಣೆ ಯಲ್ಲಿ ಜರುಗಿದ ಇಷ್ಟಲಿಂಗ ಮಹಾಪೂಜಾ ಹಾಗೂ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮನುಷ್ಯನ ಮನಸ್ಸು ಸಿರಿವಂತವಾದರೆ ಸಂಪತ್ತು ಇಲ್ಲದಿದ್ದರೂ ನಾವು ಸಿರಿವಂತರೆ. ಮನಸ್ಸೇ ಬಡವಾಗಿದ್ದರೆ ನಮ್ಮಲ್ಲಿ ಸಂಪತ್ತು ಇದ್ದರೂ ನಾವು ಬಡವರೇ. ಸಂತೃಪ್ತಿಗಿಂತ ಶ್ರೇಷ್ಠವಾದ ಸಂಪತ್ತಿಲ್ಲ ಎಂದರು.
ಹಣ ಇವತ್ತಲ್ಲ ನಾಳೆಯಾದರೂ ಸಂಪಾದಿಸ ಬಹುದು. ಆದರೆ ಜೊತೆಗಿರುವ ವ್ಯಕ್ತಿಯನ್ನು ಕಳೆದು ಕೊಳ್ಳಬಾರದು. ಸಮಯ, ಸ್ನೇಹ ಮತ್ತು ಆರೋಗ್ಯ ಇವುಗಳಿಗೆ ಬೆಲೆ ಕಟ್ಟಲಾಗದು. ಜೀವನದ ಕೆಟ್ಟ ಘಟನೆಗಳನ್ನು ಮರೆತು ಬಿಡಬೇಕು. ಆದರೆ ಅದರಿಂದ ಕಲಿತ ಪಾಠಗಳನ್ನು ಯಾವಾಗಲೂ ಮರೆಯ ಬಾರದು. ಸಾಸಿವೆಯಷ್ಟು ಸುಖಕ್ಕೆ ಸಾಗರ ದಷ್ಟು ಕಷ್ಟ ಬಿಟ್ಟಿದ್ದಲ್ಲ. ಸುಖ ದು:ಖಗಳಲ್ಲಿ ಸಮನಾಗಿ ಬಾಳುವುದೇ ಮನುಷ್ಯನ ಗುರಿಯಾಗಬೇಕು ಎಂದರು.
ಎಡೆಯೂರು ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ, ಮಳಲಿಮಠದ ಡಾ. ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಮತ್ತು ಬಿಳಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿದ್ದರು.
ಕೂಡ್ಲಿಗೆರೆ ಹಾಲೇಶ್, ಬಿ.ಕೆ ಜಗನ್ನಾಥ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ಶ್ರೀ ಜಗದ್ಗುರು ರೇಣುಕಾಚಾರ್ಯ ಗುರಕುಲ ಸಾಧಕರಿಂದ ವೇದಘೋಷ, ಚನ್ನಗಿರಿ ಡಾ. ಕೇದಾರ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿಯವರಿಂದ ಪ್ರಾರ್ಥನೆ ಜರುಗಿತು. ತಾವರೆಕೆರೆ ಡಾ.ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ನಿರೂಪಿಸಿದರು. ಮನು ಸರ್ವರನ್ನು ಸ್ವಾಗತಿಸಿ, ಸ್ವಾಮಿ ವಂದಿಸಿದರು.
Tags:
ಭದ್ರಾವತಿ ವರದಿ