ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಪ್ರತಿಮನೆಗಳಲ್ಲಿ ಮಕ್ಕಳು ಗುರು-ಹಿರಿಯರನ್ನು ಗೌರವಿಸುವ ಹಾಗು ಅವರ ಸೇವೆಯಲ್ಲಿ ತೊಡಗಿಸಿಕೊಳ್ಳುವ ಮನೋಭಾವ ಬೆಳೆಸಿಕೊಂಡಾಗ ಮಾತ್ರ ಸಮಾಜದಲ್ಲಿ ನೆಮ್ಮದಿ ಕಾಣಲು ಸಾಧ್ಯ. ಅಲ್ಲದೆ ಹಿರಿಯರು ಅನಾಥಾಶ್ರಮಗಳನ್ನು ಅವಲಂಬಿಸುವ ಅಗತ್ಯತೆ ಇರುವುದಿಲ್ಲ ಎಂದು ನಗರದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ಪಿಎಲ್‌ಡಿ) ಅಧ್ಯಕ್ಷ ಬಿ.ಕೆ ಶಿವಕುಮಾರ್ ಹೇಳಿದರು.
ನಗರದ ನ್ಯೂಟೌನ್ ಮೆಸ್ ರಸ್ತೆ ಸಮೀಪದ ಸುರಕ್ಷಾ ಜೀವನ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ಸುರಕ್ಷಾ ಜೀವನ ವೃದ್ಧಾಶ್ರಮ ಮತ್ತು ಅನಾಥಾಶ್ರಮದ 5 ನೇ ವರ್ಷದ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಮನೆಗಳಲ್ಲಿ ಗುರು-ಹಿರಿಯರನ್ನು ಗೌರವಿಸುವ ಹಾಗು ಅವರ ಸೇವೆಯಲ್ಲಿ ತೊಡಗಿಸಿಕೊಳ್ಳದಿದ್ದಲ್ಲಿ ವೃದ್ದಾಶ್ರಮಗಳು ಹೆಚ್ಚಾಗಳಿವೆ ಎಂದರು. ಅನಿವಾರ್ಯ ಕಾರಣಗಳಿಂದ ವೃದ್ಧಾಶ್ರಮಕ್ಕೆ ಬರುವ ಹಿರಿಯರನ್ನು ತಮ್ಮ ಕುಟುಂಬ ಸದಸ್ಯರಂತೆ ಕಾಣುವ ಮೂಲಕ ಅವರ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಕಾರ್ಯವಾಗಿದೆ. ಇಂತಹ ಕಾರ್ಯಕ್ಕೆ ಪ್ರತಿಯೊಬ್ಬರು ಕೈಜೋಡಿಸಬೇಕೆಂದು ಮನವಿ ಮಾಡಿದರು.
ಬ್ಲಾಕ್ ಕಾಂಗ್ರೆಸ್ ಗ್ರಾಮಾಂತರ ಘಟಕದ ಅಧ್ಯಕ್ಷ ಎಚ್.ಎಲ್.ಷಡಾಕ್ಷರಿ ಮಾತನಾಡಿ, ಆಧುನಿಕತೆ ಮುಂದುವರೆದಂತೆ ಸಂಸ್ಕಾರ ಮರೆಯುವಂತಾಗಿದೆ.ಇಂದಿನ ವಿದ್ಯಾವಂತ ಸಮಾಜದಲ್ಲಿ ವಿಚ್ಛೇದನೆಗಳು ಹೆಚ್ಚಾಗುತ್ತಿವೆ. ಇದರಿಂದ ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿ ದಾಂಪತ್ಯ ಜೀವನ ಸಹ ಅನಿರೀಕ್ಷಿತವಾಗಿ ಬಿಟ್ಟಿದೆ. ಮದುವೆಯಾಗಿ ಕೆಲವೇ ತಿಂಗಳಲ್ಲಿ ಮುರಿದು ಬೀಳುತ್ತಿವೆ ಎಂದು ವಿಪರ್ಯಾಸ ವ್ಯಕ್ತಪಡಿಸಿದರು.
ಸಮಾಜದಲ್ಲಿನ ಇಂದಿನ ಬೆಳವಣಿಗೆಗಳಿಗೆ ಯಾರು ಕಾರಣ ಎಂಬುದನ್ನು ನಾವೆಲ್ಲರೂ ಪ್ರಶ್ನೆ ಮಾಡಿಕೊಳ್ಳಬೇಕಾಗಿದೆ. ನಮ್ಮ ಪೂರ್ವಿಕರು ನಮ್ಮನ್ನು ಬೆಳೆಸಿರುವ ದಾರಿಯಲ್ಲಿ ನಾವೆಲ್ಲರೂ ಸಾಗಿದಾಗ ಮಾತ್ರ ಸಮಾಜದಲ್ಲಿ ನೆಮ್ಮದಿ ಕಾಣಲು ಸಾಧ್ಯ. ಇಂದು ಸಮಾಜದಲ್ಲಿ ಹಿರಿಯರ ಆರೈಕೆ ನಿರ್ಲಕ್ಷಿಸಲಾಗುತ್ತಿದ್ದು, ಸಮಾಜದಲ್ಲಿನ ಎಲ್ಲಾ ರೀತಿಯ ಸಮಸ್ಯೆಗಳಿಗೂ ನಾವೆಲ್ಲರೂ ಪೂರಕವಾಗಿ ಸ್ಪಂದಿಸಬೇಕಾಗಿದೆ. ಈ ನಿಟ್ಟಿನಲ್ಲಿ ಇಂತಹ ವೃದ್ದಾಶ್ರಮ ಮತ್ತು ಅನಾಥಾಶ್ರಮಗಳ ನೆರವಿಗೆ ಪ್ರತಿಯೊಬ್ಬರು ಮುಂದಾಗಬೇಕೆಂದರು.
ಸ್ನೇಹಜೀವಿ ಪೊಲೀಸ್ ಉಮೇಶ್ ಮಾತನಾಡಿ, ಶಿಕ್ಷಣ, ಪೊಲೀಸ್, ಮತ್ತಿತರೆ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸಬಹುದು ಆದರೆ ವೃದ್ದಾಶ್ರಮಗಳನ್ನು ನಡೆಸುವುದಕ್ಕೆ ಸಾಮರ್ಥ್ಯ ಇರಬೇಕು. ವೃದ್ದಾಶ್ರಮಗಳಲ್ಲಿನ ವೃದ್ಧರಿಗೆ ಕನಿಕರ ತೋರುವ ಬದಲು ಸಹಾಯ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಎಸ್. ಕುಮಾರ್, ನಗರಸಭೆ ಸದಸ್ಯರಾದ ಸರ್ವಮಂಗಳ ಭೈರಪ್ಪ, ಕೆ.ಸುದೀಪ್ ಕುಮಾರ್, ಬಿ.ಎಂ.ಮಂಜುನಾಥ್(ಟೀಕು), ಕೆಡಿಪಿ ಸದಸ್ಯ ಎಚ್.ರವಿಕುಮಾರ್, ಸೂಡಾ ಸದಸ್ಯ ಫ್ರಾನ್ಸಿಸ್, ಪ್ರಮುಖರಾದ ಹನುಮಮ್ಮ, ಪ್ರಭುಗೌಡ, ಬಿಜೆಪಿ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿದ್ದರು.
ಸುರಕ್ಷಾ ಜೀವನ ಸೇವಾ ಟ್ರಸ್ಟ್ ಕಾರ್ಯದರ್ಶಿ ಪ್ರೇಕ್ಷಾ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಟ್ರಸ್ಟ್ ಅಧ್ಯಕ್ಷೆ ಜ್ಯೋತಿ ಸೋಮಶೇಖರ್ ಅಧ್ಯಕ್ಷತೆ ವಹಿಸಿದ್ದರು. ಖಜಾಂಚಿ ಸೋಮಶೇಖರ್, ಪ್ರಮುಖರಾದ ಶಾರದ ಕುಮಾರಿ, ಶಕುಂತಲಾ ಪ್ರದೀಪ್, ಜಾಹ್ನವಿ ರೆಡ್ಡಿ, ನೇತ್ರಾ, ಮಹಿಳಾ ಸೇವಾಕರ್ತರು ಹಾಗು ವೃದ್ದರು, ಅನಾಥರು ಸೇರಿದಂತೆ ಇತರರು ಪಾಲ್ಗೊಂಡಿದ್ದರು. ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ, ಕಲಾವಿದ ಅಪೇಕ್ಷಾ ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು.
ಇದೆ ಸಂದರ್ಭದಲ್ಲಿ ನಿರ್ಗತಿಕರು, ಅನಾಥರಿಗೆ ಲಯನ್ಸ್ ಕ್ಲಬ್ ಆಶ್ರಯದಲ್ಲಿ ಆಹಾರ ಪದಾರ್ಥಗಳ ಕಿಟ್ ವಿತರಿಸಲಾಯಿತು.